ಮಡಿಕೇರಿ, ನ. ೨೫: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬೆಂಗಳೂರು ಕೊಡವ ಸಮಾಜಕ್ಕೆ ೭ ಎಕರೆ ಜಾಗ ಇದೀಗ ಅಧಿಕೃತವಾಗಿ ಮಂಜೂರಾಗಿದೆ. ಬೆಂಗಳೂರು ಯಲಹಂಕ ತಾಲೂಕಿನ ಜಾಲ ಹೋಬಳಿಯ ಹೊಸಳ್ಳಿ ಪ್ರದೇಶದಲ್ಲಿ ಈ ಜಾಗವನ್ನು ಮಂಜೂರು ಮಾಡಲಾಗಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಪತ್ರ ನೀಡಿದ್ದಾರೆ.
೨೦೧೧-೧೨ ರಲ್ಲಿ ಸಮಾಜಕ್ಕೆ ಈ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದು, ಆ ಸಂದರ್ಭ ಸುಮಾರು ೪೯ ಲಕ್ಷದಷ್ಟು ಹಣವನ್ನು ಸರಕಾರಕ್ಕೆ ಪಾವತಿಮಾಡಲಾಗಿತ್ತು. ಆದರೆ ನಂತರದಲ್ಲಿ ಕೆಲವಾರು ಸಮಸ್ಯೆಗಳು ಎದುರಾಗಿ ಇದು ನೆನೆಗುದಿಗೆ ಬಿದ್ದಿತ್ತು.
ಈ ವಿಚಾರದಲ್ಲಿ ನ್ಯಾಯಾಲಯದಿಂದಲೂ ನಂತರದಲ್ಲಿ ಹಸಿರು ನಿಶಾನೆ ದೊರೆತಿತ್ತು. ಆದರೆ ಈ ತನಕ ಅಧಿಕೃತ ಆದೇಶ ಪತ್ರ ನೀಡಲಾಗಿರಲಿಲ್ಲ. ಪ್ರಸ್ತುತ ಸಮಾಜದ ಅಧ್ಯಕ್ಷರಾಗಿರುವ ಎಂ.ಟಿ. ನಾಣಯ್ಯ ಅವರ ನೇತೃತ್ವದ ಆಡಳಿತಮಂಡಳಿ ಈ ವಿಚಾರದಲ್ಲಿ ಮರು ಪ್ರಯತ್ನ ನಡೆಸಿತ್ತು. ಮುಖ್ಯವಾಗಿ ಆಡಳಿತ ಮಂಡಳಿಯ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಈ ವಿಚಾರದಲ್ಲಿ ಅಧಿಕ ಆಸಕ್ತಿ ತೋರಿದ್ದು, ಸತತ ಪ್ರಯತ್ನ ನಡೆಸಿದ್ದರು. ಇವರ ಪ್ರಯತ್ನಕ್ಕೆ ಕೊಡಗಿನ ಶಾಸಕರಾದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಉಪ ಸಭಾಪತಿ ಪುಟ್ಟಣ್ಣ, ಯಲಹಂಕ ಶಾಸಕ ವಿಶ್ವನಾಥ್ ಅವರುಗಳೂ ಸಾಕಷ್ಟು ಬೆಂಬಲ ನೀಡಿದ್ದಾರೆ. ಇವರೊಂದಿಗೆ ಸಚಿವ ಆರ್. ಅಶೋಕ್, ಪ್ರೀತಂಗೌಡ ಸೇರಿದಂತೆ ಇನ್ನೂ ಹಲವರು ಸಹಕಾರ ನೀಡಿದ್ದಾರೆ. ಕೆ.ಜಿ. ಬೋಪಯ್ಯ ಅವರು ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ತೋರಿರುವದಾಗಿ ಸುರೇಶ್ ನಂಜಪ್ಪ ಅವರು ತಿಳಿಸಿದ್ದಾರೆ.
ಈ ಎಲ್ಲಾ ಪಯತ್ನ - ಸಹಕಾರದಿಂದ ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಆದೇಶ ಪತ್ರ ನೀಡಿದ್ದು, ಇದರ ಬಗ್ಗೆ ಸೂಕ್ತ ಕ್ರಮಕ್ಕೆ ಸ್ಥಳೀಯ ತಹಶೀಲ್ದಾರ್‌ರಿಗೆ ಸೂಚನೆಯನ್ನು ನೀಡಿದ್ದಾರೆ.