ಶ್ರೀಮಂಗಲ, ನ. ೨೫: ಮುಂಗಾರು ಪೂರ್ವದ ಕಾಫಿ ಮಂಡಳಿಯ ಬೆಳೆ ಸಮೀಕ್ಷೆಯಂತೆ ಈ ಸಾಲಿನಲ್ಲಿ ಉತ್ತಮ ಕಾಫಿ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಈ ಬಾರಿ ಮಾರುಕಟ್ಟೆ ಸಹ ಚೇತರಿಕೆ ಕಾಣುತ್ತಿದ್ದು ಬೆಳೆಗಾರರಿಗೆ ಅನುಕೂಲ ವಾತಾವರಣ ಇತ್ತು. ಆದರೆ ಅತಿವೃಷ್ಟಿ, ಅಕಾಲಿಕ ಮಳೆಯಿಂದ ಹೆಚ್ಚಿನ ಕಾಫಿ ಬೆಳೆ ನಷ್ಟವಾಗಿದೆ. ಇನ್ನೂ ಅಕಾಲಿಕ ಮಳೆ ಮುಂದುವರೆದರೆ ಮತ್ತು ಹವಾಮಾನ ಇಲಾಖೆ ಮುನ್ಸೂಚನೆಯಂತೆ ಫೆಬ್ರವರಿವರೆಗೆ ವಾಯುಭಾರ ಕುಸಿತದಿಂದ ಅಕಾಲಿಕ ಮಳೆ, ಪ್ರತಿಕೂಲ ಹವಾಮಾನ ಉಂಟಾದರೆ ಬೆಳೆಗಾರರ ಸಂಕಷ್ಟದ ಸ್ಥಿತಿ ಹೆಚ್ಚಾಗಲಿದೆ ಎಂದು ಕಾಫಿ ಮಂಡಳಿ ಕಾರ್ಯದರ್ಶಿ ಮತ್ತು ಮುಖ್ಯ ಕಾಯನಿರ್ವಹಣಾಧಿಕಾರಿ ಜಗದೀಶ್ ಆತಂಕ ವ್ಯಕ್ತಪಡಿಸಿದರು.

ದಕ್ಷಿಣ ಕೊಡಗಿನ ಅತಿವೃಷ್ಟಿ-ಅಕಾಲಿಕ ಮಳೆಗೆ ತುತ್ತಾಗಿ ಕಾಫಿ ಬೆಳೆ ನಷ್ಟಗೊಂಡ ಪ್ರದೇಶಕ್ಕೆ ಖುದ್ದು ಭೇಟಿ ನೀಡಿದ ನಂತರ ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದರು. ಕಾಫಿ ಒಣಗಿಸುವ ಯಂತ್ರ ದುಬಾರಿಯಾಗಿದ್ದು, ಸಣ್ಣ ಬೆಳೆಗಾರರಿಗೆ ಇದನ್ನು ಸ್ಥಾಪಿಸುವುದು ಹೊರೆಯಾಗಲಿದೆ. ಕಾಫಿ ಮಂಡಳಿ ಸಹಾಯಧನದಡಿ ಇದನ್ನು ಖರೀದಿಸಲು ಸ್ವಸಹಾಯ ಸಂಘ, ರೈತ ಉತ್ಪಾದಕರ ಸಂಘಗಳ ಮೂಲಕ ಯೋಜನೆ ರೂಪಿಸುವುದು ಸಣ್ಣ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾಫಿ ಒಣಗಿಸುವ ಯಂತ್ರ ಪ್ರತಿಕೂಲ ಹವಾಮಾನ ಸ್ಥಿತಿಯಲ್ಲಿ ಅಗತ್ಯವಾಗಿದೆ. ಮುಂದಿನ ಕಾಫಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಗತ್ಯ ತೀರ್ಮಾನ ಕೈಗೊಂಡು ಕಾಫಿ ಮಂಡಳಿಯ ಸಹಾಯಧನಕ್ಕೆ ಸೇರಿಸಲು ಮತ್ತು ಕೇಂದ್ರದಿAದ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು.

ಕಾಫಿ ವಾಣಿಜ್ಯ ಬೆಳೆಯಾಗಿದ್ದರೂ ಕೃಷಿಗೆ ಸಿಗುವ ಎಲ್ಲಾ ಸೌಲಭ್ಯ ಸಿಗುತ್ತಿದೆ. ಸಹಕಾರ ಸಂಘದ ಶೂನ್ಯ ಬಡ್ಡಿ ದರದ ಸಾಲ ಇತ್ಯಾದಿಯನ್ನು ಉದಾಹರಿಸಿದರು.