ಎಂ.ಎಲ್.ಸಿ. ಚುನಾವಣೆ ಕಾರಣ...?

ಮಡಿಕೇರಿ, ನ. ೨೪: ರಾಜ್ಯ ವಿಧಾನ ಪರಿಷತ್ ಚುನಾವಣೆಯ ಬಿರುಸು ಹೆಚ್ಚಾಗುತ್ತಿರುವಂತೆ ರಾಜಕೀಯವಾಗಿ ಹಲವು ಬೆಳವಣಿಗೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ.

ಕೊಡಗು ಜಿಲ್ಲೆಯಿಂದ ಮೇಲ್ಮನೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವವರು ಮಾಜಿ ಸಚಿವ ಎ. ಮಂಜು ಅವರ ಪುತ್ರ ಡಾ. ಮಂಥರ್‌ಗೌಡ ಅವರಾಗಿದ್ದಾರೆ. ಮಂಥರ್ ನೆರೆಯ ಹಾಸನ ಜಿಲ್ಲೆಯವರಾಗಿದ್ದು ಕೊಡಗಿನ ನಂಟನ್ನೂ ಹೊಂದಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಇವರ ತಂದೆ ಎ. ಮಂಜು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ.ಗೆ ಸೇರ್ಪಡೆಗೊಂಡು ಹಾಸನದಿಂದ ಲೋಕಸಭೆಗೆ ಬಿ.ಜೆ.ಪಿ. ಅಭ್ಯರ್ಥಿಯಾಗಿ ಜೆ.ಡಿ.ಎಸ್.ನ ಪ್ರಜ್ವಲ್ ರೇವಣ್ಣ ಅವರ ಎದುರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಇವರು ಪರಾಜಿತರಾದರೂ ನಂತರದಲ್ಲಿ ಬಿ.ಜೆ.ಪಿ.ಯಲ್ಲೇ ಉಳಿದಿದ್ದಾರೆ. ಇವರಿಗೆ ಬಿ.ಜೆ.ಪಿ. ಪಕ್ಷ ಮಂಡ್ಯ ಜಿಲ್ಲೆಯ ಪ್ರಭಾರಿ ಸ್ಥಾನ ಹಾಗೂ ಇನ್ನಿತರ ಕೆಲವು ಜವಾಬ್ದಾರಿಗಳನ್ನೂ ನೀಡಿದ್ದು ಈತನಕವೂ ಮಂಜು ಅವರು ಈ ಜವಾಬ್ದಾರಿ ಹೊಂದಿದ್ದರು.

ಇದೀಗ ದಿಢೀರ್ ಬೆಳವಣಿಗೆಯಲ್ಲಿ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಬಿ.ಜೆ.ಪಿ. ನಿರ್ಣಯ ತೆಗೆದುಕೊಂಡಿದೆ. ನಿನ್ನೆ ಈ ಬಗ್ಗೆ ರಾಜ್ಯ ಬಿ.ಜೆ.ಪಿ.ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಿಂದ ಕೆಲವು ಸಂಶಯಗಳು ಉಂಟಾಗಿವೆ. ಈ ಕಾರಣದಿಂದ ‘ಪಕ್ಷದ ಮಂಡ್ಯ ಜಿಲ್ಲೆಯ ಪ್ರಭಾರಿ ಮತ್ತುಳಿದ ಎಲ್ಲಾ ಜವಾಬ್ದಾರಿಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗಿದೆ’ ಎಂದಷ್ಟೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿ ಎಂ.ಪಿ. ಸುಜಾಕುಶಾಲಪ್ಪ ಸ್ಪರ್ಧಿಸಿದ್ದು, ಇವರ ಪ್ರತಿಸ್ಪರ್ಧಿಯಾಗಿರುವುದು ಎ. ಮಂಜು ಅವರ ಪುತ್ರ ಡಾ. ಮಂಥರ್‌ಗೌಡ. ಎ. ಮಂಜು ಬಿ.ಜೆ.ಪಿ.ಯಲ್ಲೇ ಇದ್ದರೂ ಪುತ್ರ ಸ್ಪರ್ಧಿಸಿರುವುದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ. ಈ ಕಾರಣದಿಂದಾಗಿ ಈ ರಾಜಕೀಯ ನಡೆ ಕಂಡುಬAದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.