ಗುಡ್ಡೆಹೊಸೂರು, ನ. ೨೪: ಭತ್ತದ ಬೆಳೆಯನ್ನು ಬೆಳೆಯುವುದು ಇವತ್ತಿನ ಕಾಲಘಟ್ಟದಲ್ಲಿ ಒಂದು ಸಾಧನೆ ಮಾಡಿದಂತೆ ಮುಖ್ಯವಾಗಿ ಕೂಲಿಕಾರ್ಮಿಕರ ಸಮಸ್ಯೆ, ನಾಟಿ ಕಾರ್ಯಕ್ಕೆ ಅಧಿಕ ಕೂಲಿ, ಕಾಡು ಪ್ರಾಣಿಗಳ ಉಪದ್ರ, ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ, ಹೀಗೆ ಹಲವು ಸಮಸ್ಯೆಗಳ ನಡುವೆ ಹಲವು ಮಂದಿ ರೈತರು ಗದ್ದೆ ನಾಟಿ ಕಾರ್ಯ ನಡೆಸಿದರೆ, ಮತ್ತೆ ಹಲವು ಮಂದಿ ತಮ್ಮ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ.
ಕೆಲವು ರೈತರು ಗದ್ದೆಗಳನ್ನು ತೋಟಗಳನ್ನಾಗಿ ಮಾಡಿದ್ದಾರೆ. ಗುಡ್ಡೆಹೊಸೂರಿನ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತವು ಕಠಾವು ಮಾಡಲು ಬಂದಿದ್ದು, ಒಂದು ತಿಂಗಳಿನಿAದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕುಯಿಲಿಗೆ ಬಂದಿರುವ ಭತ್ತದ ಗದ್ದೆಗಳು ನೀರಿನಿಂದ ತುಂಬಿವೆ. ನೀರು ಹೊರಹಾಕಲು ಕಾಲುವೆ ತೆಗೆದರೂ ಪ್ರತಿನಿತ್ಯ ಸುರಿಯುತ್ತಿರುವ ಮಳೆಯಿಂದ ಗದ್ದೆಯಲ್ಲಿ ನೀರು ಹಿಂಗುವ ಸ್ಥಿತಿಯಲಿಲ್ಲ.
ಭತ್ತದ ಕತೆ ಹೀಗಾದರೆ ಮುಸುಕಿನ ಜೋಳದ ಕತೆ ದೇವರಿಗೆ ಪ್ರಿಯ. ಜೋಳ ಕಡಿದು ಮನೆಯಂಗಳದಲ್ಲಿ ಗುಡ್ಡೆಹಾಕಿರುವ ಜೋಳ ಮತ್ತೆ ಮೊಳಕೆಯೊಡೆದು ಗಿಡವಾಗುತ್ತಿದೆ. ಈ ಭಾಗದಲ್ಲಿ ಅರೇಬಿಕಾ, ರೋಬಸ್ಟಾ ಎರಡು ತಳಿಗಳ ಕಾಫಿ ಹಣ್ಣಾಗಿದ್ದು, ಹಣ್ಣು ನೆಲದಲ್ಲಿದೆ. ನೆಲದಲ್ಲಿದ್ದರೂ ಪರವಾಗಿಲ್ಲ. ಆದರೆ, ದಿನನಿತ್ಯ ಸುರಿಯುತ್ತಿರುವ ಭಾರಿ ಮಳೆಗೆ ಹಣ್ಣುಗಳು ನೀರಿನಲ್ಲಿ ಕೊಚ್ಚಿಹೊಗುತ್ತಿವೆ. ಮುಂದಿನ ದಿನಗಳಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ನಮ್ಮ ಬೆಳೆಗಳ ಪಾಡೇನು ಎಂದು ರೈತರು ಚಿಂತಿಸುವAತಾಗಿದೆ. ವರ್ಷಗಳ ಹಿಂದೆ ಮಳೆ ನೀರಿಗಾಗಿ ರೈತರು ಆಕಾಶ ನೋಡುತ್ತಿದ್ದರು. ಆದರೆ ಇದೀಗ ಮಳೆಯಾವಾಗ ನಿಲ್ಲುತ್ತೆ, ಮೋಡ ಯಾವಾಗ ದೂರವಾಗುತ್ತೆ? ಎಂದು ಬೆಳಗ್ಗಿನಿಂದ ಸಂಜೆವರೆಗೂ ಆಕಾಶ ನೋಡುವ ಸ್ಥಿತಿ ನಿರ್ಮಾಣವಾಗಿದೆ.
- ಗಣೇಶ್ ಕುಡೆಕ್ಕಲ್