ಸೋಮವಾರಪೇಟೆ, ನ. ೨೪: ಅತಿವೃಷ್ಟಿಯಿಂದ ತಾಲೂಕಿನ ಶಾಂತಳ್ಳಿ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಫಸಲು ನಷ್ಟಗೊಂಡಿದ್ದು, ಇಂತಹ ಗ್ರಾಮಗಳ ಬೆಳೆಗಾರರಿಂದ ಪರಿಹಾರಕ್ಕಾಗಿ ಅರ್ಜಿ ಸ್ವೀಕರಿಸಲಾಗುವುದು ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.
ತಾಲೂಕಿನಲ್ಲಿ ೨೦೨೦-೨೧ರ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಈಗಾಗಲೇ ಕಾಫಿ ಬೋರ್ಡ್ ಹಾಗೂ ಕಂದಾಯ ಇಲಾಖೆಯಿಂದ ಅಂತಹ ಪ್ರದೇಶಗಳನ್ನು ಗುರುತಿಸಿ, ವರದಿ ಸಲ್ಲಿಸಲಾಗಿದೆ. ಇದೀಗ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಲಾಗಿದ್ದು, ಶೇ. ೩೩ಕ್ಕಿಂತ ಅಧಿಕ ಹಾನಿಯಾಗಿರುವ ಪ್ರದೇಶದ ಬೆಳೆಗಾರರಿಂದ ಪರಿಹಾರಕ್ಕೆ ಅರ್ಜಿ ಸ್ವೀಕರಿಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಸಂಬAಧಿಸಿದ ಹೋಬಳಿಗಳ ಕಂದಾಯ ಪರಿವೀಕ್ಷಕರಿಗೆ ಸೂಚನೆ ನೀಡಿದ್ದಾರೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಅಭಿಮಠ, ಬೆಟ್ಟದಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಹರಗ, ಕೂತಿ, ಕೊತ್ನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ತಲ್ತರೆಶೆಟ್ಟಳ್ಳಿ, ತೋಳೂರು ಶೆಟ್ಟಳ್ಳಿ, ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಮೂವತ್ತೊಕ್ಲು, ಶಿರಂಗಳ್ಳಿ, ಸೂರ್ಲಬ್ಬಿ, ಸೋಮವಾರಪೇಟೆ ಕಸಬ ಹೋಬಳಿಯ ಬಿಳಿಗೇರಿ, ಕಿರಗಂದೂರು, ತಾಕೇರಿ ಗ್ರಾಮಗಳಲ್ಲಿ ಶೇ. ೩೩ ಕ್ಕಿಂತ ಹೆಚ್ಚು ನಷ್ಟವಾಗಿರುವ ಬಗ್ಗೆ ಗುರುತಿಸಲಾಗಿದೆ.
ಈ ಗ್ರಾಮಗಳ ಬೆಳೆಗಾರರಿಂದ ಕಾಫಿ ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸ್ವೀಕರಿಸಿ, ತಂತ್ರಾAಶದಲ್ಲಿ ದಾಖಲಿಸಲು ಕ್ರಮ ವಹಿಸಬೇಕು.
ಸದರಿ ಕಾರ್ಯದಲ್ಲಿ ಲೋಪದೋಷ ಉಂಟಾದಲ್ಲಿ ಸಂಬAಧಿಸಿದ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದಾಗಿ ಕಾಫಿ ಫಸಲು ಹೆಚ್ಚು ನಷ್ಟವಾಗಿದ್ದು, ಅರೇಬಿಕಾ ಕಾಫಿ ಹಣ್ಣು ಬಹುಪಾಲ ನೆಲಕಚ್ಚಿವೆ. ಮಳೆಗಾಲದಲ್ಲಿ ವಾಡಿಕೆಯಂತೆ ಮಳೆಯಾಗಿದ್ದು, ನಂತರದ ದಿನಗಳಲ್ಲೂ ಹೆಚ್ಚು ಮಳೆಯಾದ ಹಿನ್ನೆಲೆ ಕಾಫಿ ಹಣ್ಣು ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಹೀಗೆ ನೆಲಕಚ್ಚಿದ ಕಾಫಿ ಬೇಳೆಗಳು ಗಿಡದ ಬುಡದಲ್ಲಿ ಮೊಳಕೆಯೊಡೆದು ಗಿಡಗಳಾಗುತ್ತಿವೆ.
ಒಟ್ಟಾರೆ ಅರೇಬಿಕಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.