ಮಡಿಕೇರಿ, ನ. ೨೩: ಮಾಜಿ ಸೈನಿಕರಿಗೆ ಸರಕಾರಿ ಜಾಗ ಮಂಜೂರಾತಿ ತ್ವರಿತವಾಗಿ ಆಗಬೇಕೆಂಬ ಉಚ್ಛ ನ್ಯಾಯಾಲಯದ ಆದೇಶವಿದ್ದರೂ, ಈ ಸಂಬAಧ ಜಿಲ್ಲೆಯ ಸುಮಾರು ೫೦೦ ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿವೆ. ಜಿಲ್ಲಾಡಳಿತ ಆದಷ್ಟು ಬೇಗ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಹಾಗೂ ೩ ತಿಂಗಳಿಗೊಮ್ಮೆ ಸೈನಿಕರ ಅದಾಲತ್ ನಡೆಸುವಂತೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ ಕಾರ್ಯಪ್ಪ ಅವರು ಆಗ್ರಹಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೊಡಗು ಸೈನಿಕರ ನಾಡು, ಸೇನಾ ಪ್ರೇಮಿ ಜಿಲ್ಲೆ ಎಂಬಿತ್ಯಾದಿ ಭಾಷಣಗಳನ್ನು ಮಾಡುವುದಕ್ಕೆ ಮಾತ್ರ ಕೆಲವು ರಾಜಕಾರಣಿಗಳು ಸೀಮಿತರಾಗಿದ್ದಾರೆ. ಆದರೆ, ದೇಶರಕ್ಷಣೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇದೀಗ ಜಿಲ್ಲೆಗೆ ಮರಳಿದ ಬಳಿಕ ನಮ್ಮನ್ನು ಇಂತಹವರು ಮರೆತುಬಿಡುತ್ತಾರೆ. ಹಲವು ವರ್ಷಗಳ ಹಿಂದೆಯೇ ರಾಜ್ಯ ಉಚ್ಛ ನ್ಯಾಯಾಲಯ ತ್ವರಿತ ಅರ್ಜಿ ವಿಲೇವಾರಿಗೆ

(ಮೊದಲ ಪುಟದಿಂದ) ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಸರಕಾರವು ಸುತ್ತೋಲೆ ಹೊರಡಿಸಿ ಭೂಮಿ ಮಂಜೂರು ಮಾಡುವಂತೆ ಸೂಚಿಸಿತ್ತು. ಆದರೆ ಜಿಲ್ಲೆಯಲ್ಲಿ ಸುಮಾರು ೫೦೦ ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತ ಸೈನಿಕರು ಹಾಗೂ ಯುದ್ಧದಲ್ಲಿ ಮರಣ ಹೊಂದಿದ ಸೈನಿಕರ ಕುಟುಂಬ ದವರಿಗೂ ಸರಕಾರಿ ಜಾಗ ಮಂಜೂ ರಾತಿ ಮಾಡಲು ಸರಕಾರದ ಆದೇಶವಿದೆ. ಈ ಸಂಬAಧ ಕೂಡ ಯಾವುದೇ ಜಾಗ ಮಂಜೂರಾಗಿಲ್ಲ. ನಿವೇಶನವಿಲ್ಲದ ಮಾಜಿ ಸೈನಿಕರಿಗೆ ಮತ್ತು ವಿಧವೆಯರಿಗೆ ಮನೆ ಮಂಜೂರು ಮಾಡುವ ಕಾರ್ಯದಲ್ಲು ವಿಳಂಬವಾಗುತ್ತಿದೆ. ಈ ವಿಷಯದಲ್ಲಿ ಕೂಡ ಜಿಲ್ಲಾಡಳಿತ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಕಂದಾಯ ಇಲಾಖೆಯ ಮೂಲಕ ಜಾಗ ಮಂಜೂರಾತಿ ಮಾಡಿಸುವಂತಾಗ ಬೇಕೆಂದರು.

ಸೈನಿಕರಿಗೆ ಜಿಲ್ಲೆಯಲ್ಲೊಂದು ಸಮುದಾಯ ಭವನ ನಿರ್ಮಾಣ ವಾಗಬೇಕು. ಪಿಂಚಣಿ ದೊರಕುತ್ತದೆ ಎಂಬ ಕಾರಣಕ್ಕಾಗಿ ಬಿ.ಪಿ.ಎಲ್. ಕಾರ್ಡ್ ಇಲ್ಲದೆ ನಾವು ವಂಚಿತರಾಗಿ ದ್ದೇವೆ. ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಸೈನಿಕರ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಟ ೩ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿಯ ಉಪಸ್ಥಿತಿಯಲ್ಲಿ ಸೈನಿಕ ಅದಾಲತ್ ಸಂಪರ್ಕ ಸಭೆಯನ್ನು ನಡೆಸಿ ಸೈನಿಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಂತೆ ಕಾರ್ಯಪ್ಪ ಅವರು ಒತ್ತಾಯಿಸಿದರು.

ಹಕ್ಕು ಪತ್ರ ರದ್ದು

ಮಾಜಿ ಸೈನಿಕರು ಪೈಸಾರಿ ಜಾಗವನ್ನು ಒತ್ತುವರಿ ಮಾಡಿ ಹಲವಾರು ವರ್ಷದಿಂದ ವ್ಯವಸಾಯ ಮಾಡಿ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಪಡೆದುಕೊಂಡಿರುತ್ತಾರೆ. ಆದರೆ ಇದನ್ನು ತಹಶೀಲ್ದಾರರು ವಿನಾಕಾರಣ ರದ್ದು ಮಾಡಿ ಆದೇಶ ಹೊರಡಿಸುತ್ತಾರೆ. ಈ ವಿಷಯದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪ್ರಭಾವಿಗಳು ಜಾಗ ಒತ್ತುವರಿ ಮಾಡಿದರೆ ಸುಮ್ಮನಿರುವ ಕೆಲವು ಅಧಿಕಾರಿಗಳು, ಸರಕಾರದ ಸೌಲಭ್ಯವನ್ನು ಪಡೆಯುವ ಸೈನಿಕರ ಜಾಗದ ಹಕ್ಕು ಪತ್ರವನ್ನೇ ರದ್ದು ಮಾಡುವ ಕಾರಣ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಅನವಶ್ಯಕವಾಗಿ ಮಾಜಿ ಸೈನಿಕರ ಹೆಸರಿನಲ್ಲಿ ಇನ್ನಿತರ ಹಲವು ಸಂಘಗಳು ಹುಟ್ಟಿಕೊಂಡು, ಕೊಡಗಿನ ಮೂಲ ಮಾಜಿ ಸೈನಿಕರ ಮತ್ತು ಅವರ ಕುಟುಂಬದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇಂತಹ ಕೆಲವು ಸಂಘಗಳು ರೂ. ೧,೪೦೦ ರಷ್ಟು ಸದಸ್ಯತ್ವದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸೈನಿಕರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ಕೇವಲ ನಿರ್ದಿಷ್ಟ ಸಂಘಗಳನ್ನು ಮಾಡುವಂತೆ ಮನವಿ ಮಾಡಿದರು.

ಜಿಲ್ಲೆಯ ಹಲವಾರು ಸಮಸ್ಯೆ ಗಳನ್ನು ಬಗೆಹರಿಸಲು ಚುನಾಯಿತ ಇಬ್ಬರು ಶಾಸಕರಲ್ಲಿ ಒಬ್ಬರನ್ನಾದರೂ ಸರಕಾರ ಮಂತ್ರಿಯನ್ನಾಗಿ ಮಾಡಬೇಕು. ಇಬ್ಬರಲ್ಲೊಬ್ಬರನ್ನು ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿದರೆ ಹಲವಾರು ಸಮಸ್ಯೆಗಳ ಬಗೆಹರಿಸುವಿಕೆಗೆ ಪೂರಕವಾಗುತ್ತದೆ ಎಂದು ಕಾರ್ಯಪ್ಪ ಅವರು ಅಭಿಪ್ರಾಯಪಟ್ಟರು.

ಮನೆ ತೆರಿಗೆ ವಿನಾಯಿತಿಯಿಂದ ವಂಚಿತ

ಮಾಜಿ ಸೈನಿಕರ ಮನೆ ಕಂದಾಯದಲ್ಲಿ ಶೇ. ೫೦ ರಷ್ಟು ರಿಯಾಯಿತಿ ನೀಡುವಂತೆ ಆದೇಶ ವಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮನೆಗಳಿಗೆ ಈ ಸೌಲಭ್ಯ ದೊರಕುತ್ತಿಲ್ಲ. ಈ ಬಗ್ಗೆ ಇನ್ನೂ ಸುತ್ತೋಲೆ ದೊರಕಿಲ್ಲ ಎಂಬ ಉತ್ತರವನ್ನು ಪಂಚಾಯಿತಿ ಅವರು ನೀಡುತ್ತಾರೆ. ಜಿಲ್ಲಾಡಳಿತ ಈ ವಿಷಯವಾಗಿ ಸರಿಯಾದ ಆದೇಶ ಹೊರಡಿಸಬೇಕಾಗಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಚಿಂಗಪ್ಪ ಅವರು ಒತ್ತಾಯಿಸಿದರು.

ಕೃಷಿ ಸಾಲ ಮನ್ನಾ ಯೋಜನೆ ಯಡಿ ಎಲ್ಲಾ ರೈತರಿಗೆ ದೊರಕುವ ೧ ಲಕ್ಷ ವರೆಗಿನ ಸಾಲ ಮನ್ನಾ ಯೋಜನೆಯಿಂದ ಮಾಜಿ ಸೈನಿಕರು ಮತ್ತು ಸರಕಾರಿ ನೌಕರರು ವಂಚಿತ ರಾಗಿದ್ದಾರೆ. ಪಿಂಚಣಿ ದೊರಕುತ್ತದೆ ಎಂಬ ಏಕಮಾತ್ರ ಕಾರಣಕ್ಕೆ ಈ ಯೋಜನೆಯಿಂದ ವಂಚಿತರಾಗಿದ್ದೇವೆ. ಇದು ಮರುಪರಿಶೀಲನೆ ಯಾಗ ಬೇಕೆಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಸಂತೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹೇಶ್, ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಟ್ಟಪ್ಪ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಾದ ಗಣಪತಿ ಹಾಗೂ ಮಾದಪ್ಪ ಹಾಜರಿದ್ದರು.