ಸುಂಟಿಕೊಪ್ಪ, ನ. ೨೩: ನವೆಂಬರ್‌ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೃಷಿಕರ ಬದುಕು ಮೂರಾಬಟ್ಟೆಯಾಗಿದೆ. ಅರೇಬಿಕಾ ಕಾಫಿಯನ್ನು ಕೊಯ್ಲು ಮಾಡಿ ಒಣಗಿಸಲು ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ. ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಮತ್ತಿಕಾಡು ಕಾಫಿ ತೋಟದ ಬೆಳೆಗಾರರಾದ ಜಗನ್ನಾಥ್ ಹಾಗೂ ಅಜಯ್ ಕಾಮತ್ ಅವರ ಕಾಫಿ ತೋಟದಲ್ಲಿರುವ ಅರೇಬಿಕಾ ಕಾಫಿ ಗಿಡದಲ್ಲೇ ಕೊಳೆತು ನೆಲಕಚ್ಚುತ್ತಿದೆ. ಕಾರ್ಮಿಕರಿಂದ ಕೊಯ್ಯಿಸಿದ ಕಾಫಿಯನ್ನು ಪಲ್ಪರ್ ಮಾಡಿದರೂ ಬಿಸಿಲಿಲ್ಲದೆ ಒಣಗಿಸಲು ಸಾಧ್ಯವಾಗುತ್ತಿಲ್ಲ. ಒಣಗಿಸಲು ಕಣದಲ್ಲಿ ಹಾಕಿದ ಪಾರ್ಚ್ಮೆಂಟ್ ಕಾಫಿ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಅದು ಮಾರಾಟ ಮಾಡಿದರೂ ಗುಣಮಟ್ಟವಿಲ್ಲದೆ ನಿರೀಕ್ಷಿಸಿದ ದರ ಲಭಿಸುವುದಿಲ್ಲ, ತೆಂಗು ಒಣ ಬೀಳುತ್ತಿದ್ದು ಅದೂ ಹಾಳಾಗಿದೆ. ಅಡಿಕೆ ಮರದಲ್ಲಿ ಕೊಳೆತು ನೆಲಕ್ಕೆ ಬಿದ್ದು ನೆಲ ಕಚ್ಚಿದೆ. ಕೊಡಗರಹಳ್ಳಿ, ನಾಕೂರು ಶಿರಂಗಾಲ, ಕೆದಕಲ್, ಚೆಟ್ಟಳ್ಳಿ, ಕಂಬಿಬಾಣೆ, ಗದ್ದೆಹಳ್ಳ ವಿಭಾಗದ ಕೃಷಿಕರು ಗದ್ದೆ ನಾಟಿ ಮಾಡಿದ ರೈತರ ಗೋಳು ಹೇಳತೀರದ್ದಾಗಿದೆ. ಪೈರು ಒಡೆದು ನೆಲಕ್ಕೆ ಬಿದ್ದು ನೀರು ಪಾಲಾಗಿದೆ. ಇನ್ನೇನು ಒಂದೆರಡು ತಿಂಗಳಿನಲ್ಲಿ ಕಟಾವು ಮಾಡಬೇಕಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬಿಸಿಲು ಇಲ್ಲದೆ ಸಣ್ಣ ಬೆಳೆೆಗಾರರು ಕೊಯ್ದ ಕಾಫಿ ಒಣಗಿಸಲು ಆಗದೆ ಕಟ್ಟಿ ಮೂಲೆಗೆ ಇಟ್ಟಿದ್ದು ಹುಳು ಬಂದು ನಾಶವಾಗಿದೆ. ಮುಂದಿನ ಸಾಲಿನಲ್ಲಿ ಮಕ್ಕಳ ವಿದ್ಯಾಭ್ಯಾಸ, ತೋಟ ನಿರ್ವಹಣೆ, ಜೀವನ ಸಾಗಿಸುವುದು ಹೇಗೆ ಎಂದು ತಲೆಮೇಲೆ ಕೈ ಹೊತ್ತು ರೈತರು ಚಿಂತಿಸುವAತಾಗಿದೆ.