ವೀರಾಜಪೇಟೆ, ನ. ೨೨: ಅಕ್ರಮವಾಗಿ ಬೀಟಿ ಮರಗಳ ನಾಟಾಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ವಾಹನ ಮತ್ತು ಚಾಲಕನ ಬಂಧನವಾದ ಘಟನೆ ವೀರಾಜಪೇಟೆ ಮಾಕುಟ್ಟ ಅರಣ್ಯ ತನಿಖಾ ಕೇಂದ್ರದ ಬಳಿ ನಡೆದಿದೆ. ಕೇರಳ ರಾಜ್ಯದ ಮಾನಂದವಾಡಿ ನಿವಾಸಿ ನಾಸಿರ್ ಎಂಬವರ ಪುತ್ರ ಸೇಬಿಲ್ ಟಿ.ಎನ್ ಪ್ರಾಯ (೨೧) ಅಕ್ರಮವಾಗಿ ಬೀಟಿ ಮರದ ನಾಟಾಗಳನ್ನು ಸಾಗಿಸುತಿದ್ದ ವೇಳೆಯಲ್ಲಿ ಬಂಧನವಾದ ವ್ಯಕ್ತಿ.
ಅಜ್ಞಾತ ಸ್ಥಳದಿಂದ ಬೀಟಿ ಮರಗಳ ನಾಟಾಗಳನ್ನು ಖರೀದಿಸಿ ಯಾವುದೇ ರಹದಾರಿಯನ್ನು ಪಡೆಯದೆ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯ ನೋಂದಣಿಯಾಗಿರುವ ಪಿಕ್ಅಪ್ ತಾ ೨೦ ರಂದು ರಾತ್ರಿ ೯ ರ ವೇಳೆಗೆ ಮಾಕುಟ್ಟ ತಪಾಸಣೆ ಕೇಂದ್ರ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಹನವನ್ನು ತಪಾಸಣೆಗೆ ಒಳಪಡಿಸಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಮಹೇಂದ್ರ ಪಿಕ್ಅಪ್ ವಾಹನದ (ಕೆಎಲ್-೧೩-ಎ.ಎಲ್-೯೮೩೩) ಮೇಲ್ಭಾಗದಲ್ಲಿ ಯಾರಿಗೂ ಸಂಶಯಬಾರದ ರೀತಿಯಲ್ಲಿ ಕೋಳಿ ಗೊಬ್ಬರದ ಚೀಲವನ್ನು ಇರಿಸಲಾಗಿತ್ತು. ಚೀಲಗಳನ್ನು ಬಿಡಿಬಿಡಿಯಾಗಿ ತೆಗೆಯಲಾಗಿ ಚೀಲದ ಕೆಳಭಾಗದಲ್ಲಿ ಒಟ್ಟು ೭ ಬೀಟಿ ಮರದ ನಾಟಾಗಳಿರುವುದು ಕಂಡು ಬಂದಿದೆ. ವಾಹನದ ಚಾಲಕನನ್ನು ತನಿಖೆಗೆ ಒಳಪಡಿಸಲಾಗಿದ್ದು ಅಕ್ರಮವಾಗಿ ಮರದ ನಾಟಾಗಳನ್ನು ಕೇರಳ ರಾಜ್ಯಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾನೆ. ವಾಹನ ಮತ್ತು ವಸ್ತುಗಳನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿಗಳು ವಾಹನ ಚಾಲಕನ ಮೇಲೆ ಕರ್ನಾಟಕ ರಾಜ್ಯ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ವಶಕ್ಕೆ ಪಡೆದಿರುವ ವಸ್ತು ಮತ್ತು ವಾಹನದ ಒಟ್ಟು ಮೌಲ್ಯ ರೂ. ೨ ಲಕ್ಷ ಎಂದು ಅಂದಾಜು ಮಾಡಲಾಗಿದೆ. ಅಕ್ರಮದಲ್ಲಿ ತೊಡಗಿದ್ದ ವಾಹನ ಚಾಲಕನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧÀನದಲ್ಲಿಡುವAತೆ ಆದೇಶವಾಗಿದೆ.
ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ ಎ.ಜೆ. ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸುಹಾನ ಹರೀಶ್ ಅತ್ತಾವರ, ತನಿಖಾ ಠಾಣೆಯ ಉಪವಲಯ ಅರಣ್ಯಾಧಿಕಾರಿ ಮಹಮ್ಮದ್ ಹನೀಫ್, ಮಾಕುಟ್ಟ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ ಮಹಾದೇವ ಹುರಳಿ ಮತ್ತು ಹಂಗಾಮಿ ಅರಣ್ಯ ವೀಕ್ಷಕರುಗಳಾದ ಸಜೀ ಜೇಕಬ್, ಕೆ.ಆರ್. ರಮೇಶ್, ರಂಜು, ಹಮೀದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ