ಇಂದು ಕನಕ ಜಯಂತಿ

ಕನಕದಾಸರು ಕ್ರಿ.ಶ. ೧೫೦೮ ರಿಂದ ೧೬೦೬ ರವರೆಗೂ ಜೀವಿಸಿದ್ದ ಪ್ರಸಿದ್ಧ ಹರಿದಾಸರು, ಕೀರ್ತನಕಾರರು ಹಾಗೂ ಕವಿ. ಸುಮಾರು ಒಂದು ಶತಮಾನದಷ್ಟು ದೀರ್ಘವಾದ ಪೂರ್ಣ ಜೀವನ ಅವರದು. ಹುಟ್ಟಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ. ತಂದೆ ಬೀರೇಗೌಡ - ತಾಯಿ ಬಚ್ಚಮ್ಮ. ಕನಕದಾಸರ ತಂದೆ ಬಾಡದಲ್ಲಿ ಪಾಳೆಯಪಟ್ಟಿನ ಅಧಿಕಾರಿಯಾಗಿದ್ದರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಕನಕದಾಸರು ವಿಜಯನಗರದ ಅರಸರ ಸೇನೆಯನ್ನು ಸೇರಿಕೊಂಡರು. ಹಲವು ಸಮರಗಳಲ್ಲಿ ಭಾಗವಹಿಸಿ ವೀರ ಯೋಧನೆಂಬ ಪ್ರಶಸ್ತಿಗೂ ಪಾತ್ರರಾದರು.

ಈ ವೀರಯೋಧ ದೈವಭಕ್ತನಾಗಿ ಮಾರ್ಪಟ್ಟ ಕಥೆ ಹೀಗಿದೆ. ಒಮ್ಮೆ ನಡೆದ ಹಿಂದೂ ಹೋರಾಟದಲ್ಲಿ ಅವರಿಗೆ ಬಲವಾದ ಗಾಯಗಳಾದವು. ಈ ಸ್ಥಿತಿಯಲ್ಲಿ ಅವರಿಗೆ ಕನಸಿನಲ್ಲಿ ದೇವರ ದರ್ಶನವಾಯಿತು. ‘ನೀನು ದಾಸನಾಗುತ್ತೀಯಾ?’ ಎಂದು ಕೇಳಿದಂತೆ ಆಯಿತು. ನೋವನ್ನು ತಡೆಯಲಾಗದೆ ‘ದಾಸನಾಗುವೆ, ಈ ನೋವು ನಿವಾರಿಸು’ ಎಂದು ಕೋರಿದರು. ಕೂಡಲೇ ಗಾಯಗಳೆಲ್ಲಾ ವಾಸಿಯಾದವು. ಈ ಘಟನೆಯಿಂದಾಗಿ ಭಗವಂತನ ಮಹಿಮೆಯನ್ನು ಕಂಡುಕೊAಡ ಕನಕದಾಸರು ವೈರಾಗ್ಯ ತಾಳಿದರು.

ಮುಂದೆ ಅವರು ಗುರುವಿಗಾಗಿ ಹುಡುಕಾಡಿದರು. ವಿಜಯನಗರದಲ್ಲಿದ್ದ ರಾಜಗುರು ತಿರುಮನೆ ತಾತಾಚಾರ್ಯ ಎಂಬುವರಲ್ಲಿ ಶ್ರೀ ವೈಷ್ಣವ ದೀಕ್ಷೆ ಪಡೆದರು. ಆಮೇಲೆ ಅವರಿಂದ ದಾಸ ದೀಕ್ಷೆಯನ್ನು ಪಡೆದು ಹರಿದಾಸರಾದರು. ಅವರ ಬಳಿಯಲ್ಲೇ ಇದ್ದು ನೂರಾರು ದೇವರ ನಾಮಗಳನ್ನು ರಚಿಸಿದರು.

ಕನಕದಾಸರು ಶ್ರೇಷ್ಠ ಭಕ್ತರಲ್ಲದೆ ಉತ್ತಮ ಕವಿಗಳೂ ಆಗಿದ್ದರು. ಕೀರ್ತನೆಗಳನ್ನಲ್ಲದೆ ಕೆಲವು ಕಾವ್ಯಗಳನ್ನೂ ಬರೆದಿದ್ದಾರೆ. ಇವು ಷಟ್ಪದಿ ಮತ್ತು ಸಾಂಗತ್ಯ ರೂಪದಲ್ಲಿದೆ. ‘ಮೋಹನ ತರಂಗಿಣಿ’ ಅವರ ಕಾವ್ಯಶಕ್ತಿಯನ್ನು ಎತ್ತಿ ತೋರಿಸುವ ಗ್ರಂಥ. ಭಾರತ - ಭಾಗವತಗಳಲ್ಲಿ ಬಂದಿರುವ ಕಾಮದಹನ, ಉಷಾ - ಅನಿರುದ್ಧರ ಪ್ರಣಯ ಪ್ರಸಂಗ, ಕೃಷ್ಣ-ಬಾಣಾಸುರ ಯುದ್ಧ - ಈ ಕಾವ್ಯದ ವಸ್ತು.

‘ನಳ ಚರಿತ್ರೆ’ ಭಾಮಿನಿ ಷಟ್ಪದಿಯಲ್ಲಿದೆ. ಒಂಭತ್ತು ಸಂಧಿಗಳಲ್ಲಿ ನಳನ ಕಥೆಯನ್ನು ಚಿಕ್ಕವರು ದೊಡ್ಡವರಿಗೆ ಮೆಚ್ಚುಗೆಯಾಗುವಂತೆ ನಿರೂಪಿಸಲಾಗಿದೆ. ಕನ್ನಡಕ್ಕೆ ಇದೊಂದು ಉತ್ಕೃಷ್ಟ ಕೊಡುಗೆ. ‘ಹರಿಭಕ್ತ ಸಾರವೂ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕೃತಿ. ನೀತಿ ತತ್ತ÷್ವಗಳು ಬೆರೆತಿವೆಯಾದರೂ ಇದು ಪ್ರಧಾನವಾದ ಭಕ್ತಿಕಾವ್ಯ.

‘ರಾಮಧಾನ್ಯ ಚರಿತ್ರೆ’ ಒಂದು ಅಪರೂಪದ ಕಥಾವಸ್ತುವಿನ ಮೇಲೆ ಆಧಾರಪಟ್ಟದ್ದು. ದೇವರು ಬಡವರ, ಭಕ್ತರ ಪಕ್ಷಪಾತಿ ಎಂಬ ಭಕ್ತ ಮನೋಭಾವ ಈ ಕಾವ್ಯದಲ್ಲಿ ಪ್ರತಿಪಾದಿತವಾಗಿದೆ.

ಕನಕದಾಸರು ಉಡುಪಿ, ಹಂಪೆ, ತಿರುಪತಿ, ಬೇಲೂರುಗಳಲ್ಲಿ ನೆಲೆಸಿದ್ದಂತೆಯೂ ಇವರ ಕೃತಿಗಳಿಂದ ತಿಳಿಯುತ್ತದೆ. ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯದೈವ. ಇವರಿಗೆ ತಿಮ್ಮಪ್ಪ, ಕನಕನಾಯಕ ಎಂಬ ಹೆಸರುಗಳಿದ್ದಂತೆ ತಿಳಿದುಬಂದರೂ ತಮ್ಮ ಕೃತಿ ಹಾಗೂ ಸಾಧನೆಯಿಂದ ಕನಕದಾಸರೆಂದೇ ಪ್ರಸಿದ್ಧರು. ಇವರು ಹಲವು ಪವಾಡಗಳನ್ನು ಮೆರೆದಂತೆ ತಿಳಿಯುತ್ತದೆ. ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕನಕನ ಕಿಂಡಿ ಇಂತಹ ಪವಾಡಗಳಲ್ಲಿ ಒಂದು ಎಂಬ ನಂಬಿಕೆಯಿದೆ.

ಕನಕದಾಸರ ಕೀರ್ತನೆಗಳು ಸಂಖ್ಯಾದೃಷ್ಟಿಯಿAದ ಕಡಿಮೆ ಎನ್ನಿಸಿದರೂ ಗುಣದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದುವರೆಗೂ ಸುಮಾರು ೪೦೦ ಕೀರ್ತನೆಗಳು ದೊರೆತಿವೆ. ಇವರ ಕೀರ್ತನೆಗಳಲ್ಲಿ ದೈವಭಕ್ತಿ, ಜೀವನದರ್ಶನ, ಸಮಾಜ ವಿಮರ್ಶೆ ಮುಂತಾದ ಅಂಶಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿದೆ. ಕನಕದಾಸರು ಸಮಾಜದ ಅಂಕುಡೊAಕುಗಳನ್ನು ಬಿಚ್ಚು ಮಾತುಗಳಲ್ಲಿ ಚುಚ್ಚಿ ಎಚ್ಚರಿಸಿದ್ದಾರೆ. ಇವರ ಮಿಂಚಿನAತಹ ಮಾತುಗಳು ಇವರ ವಿಶಿಷ್ಟ ವ್ಯಕ್ತಿತ್ವದ ಹೆಗ್ಗುರುತುಗಳಾಗಿವೆ.

ಮಹಾನುಭಾವರ ಜಯಂತಿಯನ್ನು ಕರ್ನಾಟಕದ ಜನರು ಪ್ರತೀವರ್ಷವು ಸಂಭ್ರಮದಿAದ ಆಚರಿಸುತ್ತಾರೆ.

- ಹರೀಶ್ ಸರಳಾಯ, ಮಡಿಕೇರಿ.