ಶನಿವಾರಸಂತೆ, ನ. ೨೧: ಅಂಬೇಡ್ಕರ್ ಜಿಂದಾಬಾದ್ ವೀಡಿಯೋ ತಿರುಚಿ ಪಾಕಿಸ್ತಾನ್ ಜಿಂದಾಬಾದ್ ಎಂದು ಮಾಡಿದ ಪ್ರಕರಣದಲ್ಲಿ ಪತ್ರಕರ್ತ ಸೇರಿ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಶನಿವಾರಸಂತೆಯ ಪತ್ರಕರ್ತ ಹೆಚ್.ಆರ್. ಹರೀಶ್ ಕುಮಾರ್, ಶನಿವಾರಸಂತೆ ಗ್ರಾ.ಪಂ. ಸದಸ್ಯ ಎಸ್.ಎನ್. ರಘು, ಕುಶಾಲನಗರದ ಗಿರೀಶ್ ಅವರುಗಳ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ತಾ. ೧೨ರಂದು ಸಂಜೆ ಮುಸ್ಲಿಂ ಸಮುದಾಯದ ಮಹಿಳೆಯರು ಅಮಾಯಕರನ್ನು ಬಂಧಿಸದAತೆ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದ್ದು, ಧರಣಿ ಸಂದರ್ಭ ಅಂಬೇಡ್ಕರ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿ ನಂತರ ಠಾಣೆಯಿಂದ ತೆರಳಿದ್ದು, ಬಳಿಕ ಈ ವೀಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದು ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಹಿನ್ನೆಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ನಂತರ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ವೀಡಿಯೋ ತಿರುಚಿದ ಕಾರಣಕ್ಕಾಗಿ ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ತಾ. ೧೫ರಂದು ಶನಿವಾರಸಂತೆ ಬಂದ್ ನಡೆಸಿದ್ದವು.