ಗೋಣಿಕೊಪ್ಪಲು, ನ. ೨೧: ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಇದೀಗ ಗೋಣಿಕೊಪ್ಪ ಪೊಲೀಸರು ಸಿಸಿ ಕ್ಯಾಮೆರಾಗಳ ಸಹಾಯ ಪಡೆದಿದ್ದಾರೆ. ನಗರದಲ್ಲಿ ಟ್ರಾಫಿಕ್ ಅವ್ಯವಸ್ಥೆ, ಅಂಗಡಿ ಮಳಿಗೆ ಕಳ್ಳತನ, ಪುಂಡಪೋಕರಿಗಳ ಓಡಾಟ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಸುಲಭವಾಗಿ ಪತ್ತೆ ಹಚ್ಚುವ ಸಲುವಾಗಿ ಹಾಗೂ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿರುವ ಅಂಗಡಿ ಮಳಿಗೆಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳಲ್ಲಿ ಒಂದು ಕ್ಯಾಮೆರಾವನ್ನು ಅಂಗಡಿಯ ಹೊರಭಾಗದಲ್ಲಿ ಅಳವಡಿಸಲು ಪೊಲೀಸರು ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ.

ಇದರಿಂದ ರಸ್ತೆಯಲ್ಲಿ ಸಂಭವಿಸಬಹುದಾದ ಅಪಘಾತ ಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ. ಅಲ್ಲದೆ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅನುಕೂಲವಾಗಲಿದೆ ಎಂಬ ಕಾರಣದಿಂದ ಪೊಲೀಸರು ಪ್ರತಿ ಅಂಗಡಿಗಳಿಗೆ ತೆರಳಿ ಮಳಿಗೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ವಿವರ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರು ಈ ರೀತಿಯ ವಿಶೇಷ ಪ್ರಯತ್ನ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.

ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳ ಸಭೆ ನಡೆಸಿರುವ ಪೊಲೀಸರು ನಗರದಲ್ಲಿರುವ ಅಂಗಡಿ ಮಳಿಗೆಗಳಿಗೆ ಕಡ್ಡಾಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಿದ್ದಾರೆ. ಸಭೆಯ ನಿರ್ಣಯದಂತೆ ವರ್ತಕರು ತಮ್ಮ ಅಂಗಡಿಯ ಹೊರಭಾಗದಲ್ಲಿ ಒಂದು ಕ್ಯಾಮೆರಾವನ್ನು ಅಳವಡಿಸುವುದು ಕಡ್ಡಾಯ ಗೊಳಿಸಲಾಗಿದೆ. ಅಗತ್ಯವಿದ್ದ ಸಂದರ್ಭ ಪೊಲೀಸರಿಗೆ ಮಾಹಿತಿಯನ್ನು ಒದಗಿಸಲು ನಿರ್ಣಯ ಕೈಗೊಳ್ಳಲಾಯಿತು.

- ಹೆಚ್.ಕೆ. ಜಗದೀಶ್