ಸೋಮವಾರಪೇಟೆ, ನ. ೨೧: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ವರ್ಷ ರೂ. ೬೦.೯೭ ಲಕ್ಷ ಲಾಭಗಳಿಸಿದೆ ಎಂದು ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ತಿಳಿಸಿದರು.
ಕೊಡವ ಸಮಾಜದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ೬ ವರ್ಷಗಳಿಂದ ಸತತ ನಷ್ಟವನ್ನು ಅನುಭವಿಸಿಕೊಂಡು ಬರುತ್ತಿರುವ ಬ್ಯಾಂಕ್, ರೂ ೫೭.೬೭ ಲಕ್ಷ ನಷ್ಟ ಎದುರಿಸುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ರೂ. ೬೦.೯೭ ಲಕ್ಷ ಲಾಭಗಳಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಬ್ಯಾAಕ್‌ನಲ್ಲಿ ೧೮,೩೭೦ ಸದಸ್ಯರಿದ್ದು, ೧೬,೫೦೮ ಸದಸ್ಯರು ತಮ್ಮ ಪೂರ್ಣ ಪ್ರಮಾಣದ ಸದಸ್ಯತ್ವ ಶುಲ್ಕ ಪಾವತಿಸಿರುವುದಿಲ್ಲ. ಇವರಿಗೆ ತಿಳುವಳಿಕೆ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ. ಹಾಲಿ ೧೮೬೨ ಮಂದಿ ಸದಸ್ಯರು ತಮ್ಮ ಪೂರ್ಣ ಪ್ರಮಾಣದ ಸದಸ್ಯತ್ವ ಶುಲ್ಕ ನೀಡಿ ಮುಂದುವರೆದಿದ್ದಾರೆ. ಬ್ಯಾಂಕ್‌ನ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯರು ತಮ್ಮ ಬಾಕಿ ಉಳಿದಿರುವ ಸದಸ್ಯತ್ವ ಶುಲ್ಕವನ್ನು ಪೂರ್ಣಗೊಳಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಶೇ. ೭೧.೩೩ ರಷ್ಟು ಕೃಷಿ ಸಾಲವನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದೆ. ಕೃಷಿ ಸಾಲವಲ್ಲದೆ, ಕೆಲವೊಂದು ವ್ಯಾಪಾರಕ್ಕೂ ಸಾಲ ವಿತರಿಸಲಾಗುತ್ತಿದೆ. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಜಿ. ಪೂವಮ್ಮ, ನಿರ್ದೇಶಕರು ಗಳಾದ ಕೆ.ಆರ್. ಕೊಮಾರಪ್ಪ, ಎಂ.ಟಿ. ದಾಮೋಧರ್, ಬಿ.ಬಿ. ಸತೀಶ್, ಡಿ. ಭಗವಾನ್, ಎಚ್.ಬಿ. ಶಿವಕುಮಾರ್, ಪಿ.ಸಿ. ಬೇಲೂರಯ್ಯ, ಡಿ.ಡಿ. ಪೊನ್ನಪ್ಪ, ಬಿ. ಜನಾರ್ಧನ ಪ್ರಭು, ಕೆ.ಬಿ. ಕವಿತ, ಕೆ.ಎ. ಲೋಕೇಶ್, ಬಿ.ಕೆ. ಪ್ರಶಾಂತ್, ಸರ್ಕಾರದ ನಾಮನಿರ್ದೇಶಿತ ಸದಸ್ಯರಾದ ಮೋಕ್ಷಿಕ್‌ರಾಜ್ ಮತ್ತು ವ್ಯವಸ್ಥಾಪಕರಾದ ಬಿ.ವಿ. ಶಿವಕುಮಾರ್ ಉಪಸ್ಥಿತರಿದ್ದರು.