ಮಡಿಕೇರಿ, ನ.೧೯; ಮೀನುಗಾರಿಕೆ, ಹಂದಿ,ಕೋಳಿ, ಹಸು ಸಾಕಣೆ ಸೇರಿದಂತೆ ಸ್ವ ಉದ್ಯೋಗ ಕೈಗೊಳ್ಳುವ ಸಲುವಾಗಿ ರೈತರಿಗೆ ಸಾಲ ನೀಡಲು ತೀರ್ಮಾನಿಸಿರುವದಾಗಿ ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹೇಳಿದರು.

ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ನಿರ್ದೇಶನದಂತೆ ಮೀನು ಸಾಕಣೆಗೆ ರೈತರಿಗೆ ಬಡ್ಡಿ ಆಧಾರದಲ್ಲಿ ಸಾಲ ನೀಡಲಾಗಿದೆ. ಆದರೆ ಮರುಪಾವತಿಗೆ ಒಂದು ವರ್ಷದ ಅವಧಿ ಮಾತ್ರ ನೀಡಲಾಗಿದೆ, ಇದು ರೈತರಿಗೆ ಕಷ್ಟವಾಗುವದರಿಂದ ಅವಧಿ ಹೆಚ್ಚಿಸಿ ಕಂತಿನ ರೂಪದಲ್ಲಿ ಮರುಪಾವತಿ ಮಾಡುವಂತೆ ಸಾಲ ನೀಡಲು ಆಡಳಿತ ಮಂಡಳಿ ತಿರ್ಮಾನಿಸಿದೆ. ಇದರಿಂದಾಗಿ ಸ್ವ ಉದ್ಯೋಗ ಕೈಗೊಳ್ಳುವ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಆರ್‌ಟಿಸಿಯಲ್ಲಿ ಜಂಟಿ ಖಾತೆ ಹೊಂದಿರುವವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಂಟಿ ಖಾತೆ ಬೇರ್ಪಡಿಸಿ ವೈಯಕ್ತಿಕ ಖಾತೆ ಮಾಡಿಸಿಕೊಂಡು ಸೌಲಭ್ಯ ಹೊಂದಿಕೊಳ್ಳುವAತೆ ಸಲಹೆ ಮಾಡಿದರು. ಆಭರಣ ಈಡಿನ ಮೇಲೆ ಸಾಲ ಪಡೆದುಕೊಂಡಿರುವವರು ಅವಧಿ ಮೀರಿದ ಬಳಿಕ ಬ್ಯಾಂಕಿಗೆ ಬಾರದೆ ವಿಳಂಬ ಮಾಡಿದರೆ ಬಡ್ಡಿ ಹೆಚ್ಚಾಗಲಿದೆ. ಹಾಗಾಗಿ ಬ್ಯಾಂಕಿಗೆ ಬಂದು ಬಿಡಿಸಿಕೊಳ್ಳುವದು ಅಥವಾ ನವೀಕರಣ ಮಾಡಿಕೊಳ್ಳುವಂತೆ ಸಲಹೆ ಮಾಡಿದರು.

೨೦೨೦-೨೧ನೇ ಸಾಲಿಗೆ ಸಂಘವು ರೂ.೨೩,೧೧,೮೦೩.೯೩ರಷ್ಟು ಲಾಭ ಗಳಿಸಿದೆ. ಸಂಘದಿAದ ೬೫೧.೦೬ ಲಕ್ಷ ಸಾಲ ನೀಡಲಾಗಿದ್ದು, ಶೇ. ೯೯.೭೩ರಷ್ಟು ವಸೂಲಾತಿಯಾಗಿದೆ. ಓರ್ವ ವ್ಯಕ್ತಿ ಮಾತ್ರ ಸಾಲ ಪಾವತಿಸದೆ ಇರುವದರಿಂದ ಶೇ.೧೦೦ಸಾಧನೆ ಕಷ್ಟವಾಗುತ್ತಿದೆ, ಲಾಭದಲ್ಲಿ ಸಂಘದ ಸದಸ್ಯರಿಗೆ ಶೇ.೧೨ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಗೊಬ್ಬರ, ಕಾಫಿ ಚೀಲ ಮತ್ತು ತಾಟ್‌ಗಳನ್ನು ಮಾರಾಟ ಮಾಡಲಾಗಿದ್ದು, ರೂ.೧.೩೦ಲಕ್ಷ ಲಾಭ ಬಂದಿದೆ. ಜಿಲ್ಲಾ ಕೇಂದ್ರದಿAದ ಕೆಸಿಸಿ ಸಾಲವಾಗಿ ರೂ.೬೩೫ಲಕ್ಷ ಪಡೆದುಕೊಂಡು ಸಕಾಲಕ್ಕೆ ಮರು ಪಾವತಿ ಮಾಡಲಾಗಿದೆ. ಹಟ್ಟಿಹೊಳೆ ಶಾಖೆಯಲ್ಲಿ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ನಿರ್ದೇಶಕರುಗಳಾದ ಕುಂಬಗೌಡನ ಪ್ರಸನ್ನ, ಕನ್ನಿಕಂಡ ಸುಬ್ಬಯ್ಯ, ಬಿ.ಎನ್.ರಮೇಶ್, ಲಕ್ಕಪ್ಪನ ವಿಜೇತ್, ಕೊಟ್ಟಕೇರಿಯನ ಪ್ರದೀಪ್, ಮಂಜುನಾಥ ನಾಯ್ಕ, ಹೆಚ್.ಎಂ. ಸುಧಾಕರ, ಉಕ್ಕೇರಂಡ ನೀಲಮ್ಮ, ಪಿ.ಎಂ.ಸುಲೋಚನ, ಗೌರವ ಕಾರ್ಯ ನಿರ್ವಹಣಾಧಿಕಾರಿ ಸಿ.ಬಿ.ಕುಟ್ಟಪ್ಪ, ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಶೋಭಾವತಿ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಟಿ.ಆರ್.ಪವನ್ ಇದ್ದರು. ನಿರ್ದೇಶಕಿ ಪಡಿಯೇಟಿರ ಎಸ್.ಕವಿತ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಅಣ್ಣಚ್ಚಿರ ಸತೀಶ್ ಸ್ವಾಗತಿಸಿದರು.