ಮಡಿಕೇರಿ, ನ.೧೯ : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೊಡಗಿನವರಿಗೆ ಅವಕಾಶ ನೀಡಬೇಕೆಂದು ಕೆಪಿಸಿಸಿಯ ಮಾಧ್ಯಮ ಸಂವಹನ ವಕ್ತಾರ ಟಿ.ಪಿ.ರಮೇಶ್ ಕೆಪಿಸಿಸಿಗೆ ಮನವಿ ಮಾಡಿದ್ದಾರೆ.

ಸ್ಥಳೀಯರೇ ಆದ ಪಕ್ಷದ ಹಿರಿಯ ನಾಯಕ ಕೆ.ಎಂ.ಲೋಕೇಶ್ ಅವರು ಸ್ಪರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಮತಗಳೊಂದಿಗೆ ಪಕ್ಷೇತರ ಸದಸ್ಯರನ್ನು ಅವಲಂಬಿಸಿ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಿದೆ. ಅಲ್ಲದೆ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿ ಬೆಂಬಲ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೊರ ಜಿಲ್ಲೆಯ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೊದಲು ಕೊಡಗು ಜಿಲ್ಲೆಗೆ ಆದ್ಯತೆ ನೀಡಬೇಕೆಂದು ರಮೇಶ್ ಒತ್ತಾಯಿಸಿದ್ದಾರೆ.