ವೀರಾಜಪೇಟೆ, ನ. ೧೭: ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿ ಗಳು ಸಾಮಾನ್ಯಜ್ಞಾನ, ವಿಷಯ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕಲಿಯು ವುದರೊಂದಿಗೆ ಪ್ರಾಮಾಣಿಕತೆಯ ಮೂಲಕ ಸತ್ಯದ ದಾರಿಯಲ್ಲಿ ಯಶಸ್ಸನ್ನುಗಳಿಸಿ ಉನ್ನತ ಅಧಿಕಾರಿಗಳಾಗಿ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಜಿ. ಲೋಕೇಶ್ ಕಿವಿಮಾತು ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಂತ ಅನ್ನಮ್ಮ ಶಾಲೆ ಇವರ ಸಹಭಾಗಿತ್ವದಲ್ಲಿ ‘ಆಜಾದಿ ಕಾ ಅಮೃತಮಹೋತ್ಸವ' ಪ್ರಯುಕ್ತ ಜಾಥಾ ಮತ್ತು ‘ಮಕ್ಕಳ ದಿನಾಚರಣೆ' ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಎಲ್ಲರಿಗೂ ಶುಭ ಕೋರಿದರು.

ಇದೇ ಸಂದರ್ಭ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಜಾಥಾಕ್ಕೆ ಚಾಲನೆ ನೀಡಿದರು. ವೀರಾಜಪೇಟೆ ತಹಶೀಲ್ದಾರ್ ಡಾ. ಆರ್ ಯೋಗಾನಂದ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಉನ್ನತ ಆದರ್ಶಗಳನ್ನು ಬೆಳೆಸಿಕೊಂಡು ಭವಿಷ್ಯದ ಗುರಿಯತ್ತ ಸಾಗಬೇಕು ಎಂದು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅನ್ನಮ್ಮ ಶಾಲೆಯ ಧರ್ಮಗುರುಗಳಾದ ಫಾದರ್ ಮದಲೈಮುತ್ತು, ವಿದ್ಯಾರ್ಥಿ ಮತ್ತು ನೆರೆದವರಿಗೆ ಆಶೀರ್ವಚನ ನೀಡಿದರು. ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ವಿಶೇಷವಾಗಿ ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಕೋನಪ್ಪ, ಅಪರ ಸಿವಿಲ್ ನ್ಯಾಯಾಧೀಶೆ ಮಹಾಲಕ್ಷಿö್ಮ, ವೀರಾಜಪೇಟೆ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ತಾಲೂಕಿನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ವಿವಿಧ ಸ್ಥರದ ಅಧಿಕಾರಿಗಳು, ವಿವಿಧ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಹಂತದಲ್ಲಿ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ತನ್ನ ಪ್ರಾಣದ ಹಂಗನ್ನು ತೊರೆದು ನೀರಿನಲ್ಲಿ ಬಿದ್ದ ವಯೋವೃದ್ಧ ಮಹಿಳೆಯ ಜೀವ ರಕ್ಷಿಸಿದ ಗೋಣಿಕೊಪ್ಪ ಸರ್ವ ದೈವತಾ ಕಾಲೇಜು ವಿದ್ಯಾರ್ಥಿನಿ ನಮ್ರತಾ ಅವರನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಯ ಶೌರ್ಯವನ್ನು ಪ್ರಶಂಸಿಸಿ ವೈಯಕ್ತಿಕವಾಗಿ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಸ್ವಾಗತಿಸಿ, ಶಿಕ್ಷಕಿ ಶಾಲಿನಿ ವಂದಿಸಿದರು.