ಕೂಡಿಗೆ, ನ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರುಗಳು ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿದ ಪ್ರದೇಶಗಳಾಗಿವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ರೈತರು ಭತ್ತದ ಬೆಳೆಯನ್ಮು ಅವಲಂಭಿಸಿರುತ್ತಾರೆ. ಈ ಗ್ರಾಮಗಳಿಗೆ ಮೇಲ್ಭಾಗದಲ್ಲಿ ಹಾರಂಗಿಯ ಮುಖ್ಯ ನಾಲೆ, ಕೆಳ ಭಾಗದಲ್ಲಿ ಹಾರಂಗಿ ನದಿ, ಇನ್ನೊಂದು ಭಾಗದಲ್ಲಿ ಕಕ್ಕೆ ಹೊಳೆ ಹರಿಯುತ್ತಿದೆ. ಈ ಮೂರು ಶೀತವಲಯದ ಮಧ್ಯದಲ್ಲಿ ಎರಡೂ ಗ್ರಾಮಗಳಾದ ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮಗಳಿದ್ದು, ಈ ವ್ಯಾಪ್ತಿಯ ಮನೆಗಳು ಶೀತಮಯವಾಗಿವೆ. ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯ ಅಂಗಳದಲ್ಲಿ ಶೀತದ ನೀರು ನಿಲ್ಲುತ್ತಿದೆ. ಇದರಿಂದಾಗಿ ಇಡೀ ಮನೆಯೇ ಶೀತಮಯವಾಗಿ ಮನೆಯ ಗೋಡೆಗಳು ಬೀಳುವಂತಹ ಪ್ರಸಂಗ ಎದುರಾಗಿದೆ. ಹಾಗಾಗಿ ಈ ಪ್ರದೇಶವನ್ನು ಶೀತ ಪೀಡಿತ ಪ್ರದೇಶವೆಂದು ಘೋಷಿಸಲು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಹಾರAಗಿ ಅಣೆಕಟ್ಟೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹುದುಗೂರು ಗ್ರಾಮದಲ್ಲಿ ಎರಡು ಕಡೆಗಳಲ್ಲಿ ಮುಖ್ಯ ನಾಲೆಗೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆಗಳನ್ನು ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭದಲ್ಲಿ ಚಿಕ್ಕದಾದ ಯೋಜನೆಯ ಅಡಿಯಲ್ಲಿ ಕಟ್ಟಲಾಗಿದೆ.

(ಮೊದಲ ಪುಟದಿಂದ) ಹಾರಂಗಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯನ್ನು ಹೆಚ್ಚು ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ಮೊದಲು ನಿರ್ಮಾಣ ಮಾಡಿದ ಮುಖ್ಯ ನಾಲೆಯ ಮೇಲ್ಭಾಗದಲ್ಲಿ ಕಾಲುವೆಯು ಕಿರಿದಾಗಿದ್ದು, ನಾಲೆ ನೀರು ಸರಾಗವಾಗಿ ಹರಿಯುಲು ಸಾಧ್ಯವಾಗುತ್ತಿಲ್ಲ. ಈ ಎರಡೂ ಕಡೆಗಳ ಮೇಲ್ಭಾಗದ ಸೇತುವೆ ಮಾದರಿ ಕಾಲುವೆಗಳಲ್ಲಿ ನೀರು ತಡೆಹಿಡಿದಂತೆ ಆಗಿದೆ. ಇದರಿಂದಾಗಿ ನೀರು ಮುಖ್ಯ ನಾಲೆ ಹೊಂದಿಕೊAಡಿರುವ ಸೇತುವೆ ಭಾಗದಲ್ಲಿ ಭಾರೀ ಗಾತ್ರದಲ್ಲಿ ಸೋರುತ್ತಿದೆ. ಈ ನೀರು ಹರಿಯಲು ಮೂರು ಕಡೆಗಳಲ್ಲಿ ಉಪ ಕಾಲುವೆ ನಿರ್ಮಾಣವಾಗಿದೆ. ಆದರೆ ಅದರ ಸಿಮೆಂಟ್ ಕಾಂಕ್ರಿಟ್ ಕಿತ್ತುಹೋಗಿ ಅದರ ಲೈನಿಂಗ್ ಸಂಪೂರ್ಣವಾಗಿ ಹಾಳಾಗಿದ್ದು, ನೀರು ಕೆಳ ಭಾಗದ ಮನೆಗಳತ್ತ ಮತ್ತು ಮನೆ ಅಂಗಳಗಳಲ್ಲಿ, ರಸ್ತೆಯಲ್ಲಿ ಹರಿಯುತ್ತಿದೆ.

ಈ ಕಾರಣದಿಂದಾಗಿ ಮನೆಗಳ ಗೋಡೆ ಬಿರುಕು ಬಿಡುವುದರ ಜೊತೆಗೆ ಕೃಷಿ ಭೂಮಿಯು ಸಹ ಶೀತ (ಜೌಗು) ಪ್ರದೇಶವಾಗಿದೆ. ಇದರಿಂದಾಗಿ ಯಾವ ಬೆಳೆಯೂ ಉತ್ತಮವಾಗಿ ಬರುತ್ತಿಲ್ಲ. ಈ ವ್ಯಾಪ್ತಿಯ ರೈತರ ಬದುಕು ಕಷ್ಟಕರವಾಗಿದೆ.

ಗ್ರಾಮಸ್ಥರ ಸಭೆ : ಈ ಎರಡೂ ಗ್ರಾಮಗಳ ನೂರಾರು ರೈತರು ಸಭೆ ಸೇರಿ ಈ ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡಲು ಕಂದಾಯ ಇಲಾಖೆಗೆ ಸೇರಿದ ಮೈಸೂರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ. ಕಾವೇರಿ ನೀರಾವರಿ ನಿಗಮದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಕ್ಷೇತ್ರದ ಶಾಸಕರು ಗಮನ ಹರಿಸಿ ಈ ಎರಡೂ ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡಲು ಸಹಕಾರ ನೀಡುವಂತೆ ಮನವಿ ಮಾಡುವಂತೆ ತೀರ್ಮಾನ ಕೈಗೊಂಡಿದ್ದಾರೆ. ಕೆ.ಕೆ. ನಾಗರಾಜಶೆಟ್ಟಿ.