ಜನಸ್ವರಾಜ್ ಕಾರ್ಯಕ್ರಮ
ಮಡಿಕೇರಿ, ನ. ೧೮: ವಿಧಾನ ಪರಿಷತ್ ಚುನಾವಣೆ ಸಂಬAಧ ಭಾರತೀಯ ಜನತಾ ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ಹಮ್ಮಿ ಕೊಂಡಿದ್ದು, ೪ ತಂಡಗಳನ್ನು ರಚಿಸಿ ಈ ಕಾರ್ಯ ಈಗಾಗಲೇ ಪ್ರಾರಂಭ ವಾಗಿದೆ. ಈ ಸಲುವಾಗಿ ಕೊಡಗಿಗೂ ೧ ತಂಡ ಭೇಟಿ ನೀಡಲಿದ್ದು, ತಾ. ೨೨ ರಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಜನಸ್ವರಾಜ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ಮಾಹಿತಿ ನೀಡಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ೨೦ ಕ್ಷೇತ್ರಗಳಲ್ಲಿ ೨೫ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ ೧ ಸ್ಥಾನಕ್ಕೆ ಚುನಾವಣೆ ಡಿಸೆಂಬರ್ ೧೦ ರಂದು ನಡೆಯಲಿದೆ. ಚುನಾವಣೆ ಸಂಬAಧ ನಡೆಯಲಿರುವ ಜನಸ್ವರಾಜ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಎಸ್.ಟಿ. ಸೋಮಶೇಖರ್, ಅಶ್ವತ್ ನಾರಾಯಣ ಗೌಡ, ಅಂಗಾರ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ, ಶಂಕರಪ್ಪ, ರಾಜ್ಯ ಕಾರ್ಯದರ್ಶಿ ವಿನಯ್ ಬಿದ್ರೆ ಮತ್ತು ತಂಡದವರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜಿಲ್ಲೆಯ ಮೂವರು ಬಿ.ಜೆ.ಪಿ. ಶಾಸಕರು, ಬಿ.ಜೆ.ಪಿ.ಯ ಪಟ್ಟಣ ಪಂಚಾಯಿತಿ ಹಾಗೂ ನಗರಸಭಾ ಸದಸ್ಯರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕೂಡ ಇದರಲ್ಲಿ ಭಾಗವಹಿಸಲಿ ರುವುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಪಕ್ಷದಿಂದ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಸಧ್ಯದಲ್ಲಿ ಕೇಂದ್ರ ಸಮಿತಿ ಅಧಿಕೃತವಾಗಿ ಅಭ್ಯರ್ಥಿಯನ್ನು ಘೋಷಿಸಬಹುದು. ಯಾರೇ ಅಭ್ಯರ್ಥಿಯಾದರೂ ಅವರನ್ನು ಪಕ್ಷ ಸ್ವಾಗತಿಸಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಇತ್ತೀಚೆಗೆ ಶನಿವಾರಸಂತೆಯಲ್ಲಿ ನಡೆದ ಹಲ್ಲೆ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಿದ ಬಳಿಕ, ಅವರುಗಳನ್ನು ಬಿಡುಗಡೆ ಮಾಡಬೇಕಾಗಿ ಹಲವು ಮಹಿಳೆಯರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೆಲವು ಮಹಿಳೆಯರು ಕೂಗಿದ್ದಾರೆ. ಇದು ದೇಶದ್ರೋಹಿ ಕೆಲಸವಾಗಿದೆ. ಇಂತಹವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕಾಗಿ ರಾಬಿನ್ ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಭಾರತೀಶ್, ರವಿ ಕಾಳಪ್ಪ, ಅರುಣ್ ಭೀಮಯ್ಯ, ಜಿಲ್ಲಾ ಬಿ.ಜೆ.ಪಿ. ವಕ್ತಾರ ಮಹೇಶ್ ಜೈನಿ ಹಾಗೂ ಅರುಣ್ ಕುಮಾರ್ ಹಾಜರಿದ್ದರು.