ಕೂಡಿಗೆ, ನ. ೧೭: ಕೂಡಿಗೆ ಸಮೀಪದ ಸೀಗೆಹೊಸೂರು ಭುವನಗಿರಿ ವ್ಯಾಪ್ತಿಯಲ್ಲಿ ಚಿರತೆಯೊಂದು ಆಡನ್ನು ಎಳೆದೊಯ್ದು ಬಲಿ ತೆಗೆದುಕೊಂಡಿದೆ. ಸೀಗೆಹೊಸೂರಿನ ಶಶಿಕಲಾ ಎಂಬವರಿಗೆ ಸೇರಿದ ಕಟ್ಟಿ ಹಾಕಿದ್ದ ಆಡನ್ನು ಎಳೆದೊಯ್ದು ಚಿರತೆ ತಿಂದು ಹಾಕಿದೆ. ಸ್ಥಳದಲ್ಲಿ ಚಿರತೆ ಹೆಜ್ಜೆ ಗೋಚರವಾಗಿದ್ದು, ಆಡಿನ ಸಾವಿಗೆ ಚಿರತೆ ದಾಳಿ ಕಾರಣ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದರು.

ಈ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿAದ ಚಿರತೆಯ ಕಾಟ ಹೆಚ್ಚಾಗಿದ್ದು, ಹಸು ಕೊಟ್ಟಿಗೆಯಿಂದ ಎಳೆದೊಯ್ದು ತಿಂದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಕೆಲಸ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿತು. ಸವಾರ ನಾಲೆಗೆ ಬಿದ್ದು ಈಜಿ ಪ್ರಾಣ ಉಳಿಸಿಕೊಂಡಿದ್ದ. ಇದೀಗ ಆಡಿನ ಮೇಲೆ ದಾಳಿ ನಡೆಸಿ ರುವುದು ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆಯವರು ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆಗಾಗಿ ಬೋನ್ ಇಟ್ಟಿದ್ದು, ಚಿರತೆ ಮಾತ್ರ ಸೆರೆಯಾಗಿಲ್ಲ. ಸ್ಥಳಕ್ಕೆ ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್ ಸೇರಿದಂತೆ ಸ್ಥಳೀಯ ಗ್ರಾ.ಪಂ. ಸದಸ್ಯ ಅನಂತ್‌ಕುಮಾರ್, ಚಂದ್ರು ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯನ್ನು ಸೆರೆ ಹಿಡಿಯದಿದ್ದಲ್ಲಿ ಅರಣ್ಯ ಇಲಾಖೆಯ ರಸ್ತೆತಡೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.