ಚೆಟ್ಟಳ್ಳಿ, ನ. ೧೮: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿಗೆ ಸೂಕ್ತ ಹಾಗೂ ಶಾಶ್ವತ ಜಾಗವನ್ನು ಗುರುತಿಸಲಾಗದೆ ಪಂಚಾಯಿತಿ ಕಟ್ಟಡದ ಬದಿಯಲ್ಲೇ ಹಲವು ವರ್ಷಗಳಿಂದ ಕಸವನ್ನು ಸುರಿಯುತ್ತಿದ್ದು, ಸರ್ವೆ ನಂ. ೪೯/೧೩ ರಲ್ಲಿ ೦.೫೦ ಎಕರೆ ಪೈಸಾರಿ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಕಸ ವಿಲೇವಾರಿಗೆ ಕಾಯ್ದಿರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಹೋಬಳಿಯ ಚೇರಳ ಗ್ರಾಮದ ಸರ್ವೆ ನಂ. ೪೯/೧೩ರಲ್ಲಿ ೨.೩೦ ಎಕರೆ ಪಹಣಿಯಂತೆ ಕಲಂ ೯ರಲ್ಲಿ ಸರ್ಕಾರದ ಹೆಸರಿನಲ್ಲಿದ್ದು ಕಲಂ ೬ರಲ್ಲಿ ನಿಬಂಧನೆ ಪೈಸಾರಿ ಜಾಗದಲ್ಲಿ ೦.೫೦ ಎಕರೆ ಕಸ ವಿಲೇವಾರಿ ಉದ್ದೇಶಕ್ಕೆ ನೀಡಬೇಕೆಂದು ಗ್ರೇಡ್-೧ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಫೆಬ್ರವರಿ ೮, ೨೦೨೧ ರಂದು ಸೋಮವಾರಪೇಟೆ ತಹಶೀಲ್ದಾರರಿಗೆ ಮನವಿ ಮಾಡಿತ್ತು.

ಕಂದಾಯ ಇಲಾಖೆ ಪರಿಶೀಲನೆ ನಡೆಸಿದ್ದು, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಜಾಗದಲ್ಲಿರುವ ಸರಕಾರಿ ಪೈಸಾರಿ ಜಾಗವನ್ನು ಪಂಚಾಯಿತಿ ಕಸ ವಿಲೇವಾರಿಗೆ ಸೂಕ್ತ ಜಾಗವೆಂದು ಕಂದಾಯ ಪರಿವೀಕ್ಷಕರು ನೀಡಿದ ವರದಿಯ ಆಧÀರಿಸಿ ತಹಶೀಲ್ದಾರರ ವರದಿಯ ಮೇರೆಗೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹೆಸರಿಗೆ ಕರ್ನಾಟಕ ಭೂಕಂದಾಯ ಕಾಯ್ದೆ ೧೯೬೪ ಕಲಂ ೭೧ರ ಅನ್ವಯ ಈ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಕಸ ವಿಲೇವಾರಿಗೆ ಕಾಯ್ದಿರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಈ ಜಾಗದಲ್ಲಿ ಹಸಿಕಸ ಒಣಕಸದ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗುವುದು. ಅಂಗಡಿ ಮುಂಗಟ್ಟು ಮನೆಗಳಿಗೆ ಬಕೆಟುಗಳನ್ನು ನೀಡುವ ಮೂಲಕ ಮನೆಮನೆ ತ್ಯಾಜ್ಯ ಸಂಗ್ರಹ ಮಾಡುವ ಯೋಜನೆ ಮಾಡಲಾಗಿದೆ. ಪಟ್ಟಣ ಸಮೀಪದ ಮಾರುಕಟ್ಟೆಯ ಬದಿಯಲ್ಲಿ ನೂತನವಾಗಿ ನಿರ್ಮಿಸಿದ ಕಸ ವಿಲೇವಾರಿ ಗೋದಾಮು ಕಾರ್ಯಾರಂಭಗೊಳ್ಳಬೇಕಿದೆ. ಜೊತೆಗೆ ಹಲವು ತಿಂಗಳುಗಳಿAದ ವಾಹನ ಚಾಲಕರಿಲ್ಲದೆ ಕಸ ವಿಂಗಡಣಾ ಗೋದಾಮಿನೊಳಗೆ ನಿಂತಿರುವ ಕಸ ವಿಲೇವಾರಿ ವಾಹನಕ್ಕೆ ಚಾಲಕರ ನೇಮಕವಾಗಬೇಕಿದೆ.

ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಸಮ್ಮುಖದಲ್ಲಿ ಕಸ ವಿಲೇವಾರಿಯ ನೂತನ ಜಾಗವನ್ನು ಗುರುತಿಸುವ ದಿನಾಂಕವನ್ನು ತಿಳಿಸಲಾಗಿ ಕಸ ವಿಲೇವಾರಿ ಘಟಕ ಸ್ಥಾಪನೆಯ ಮುಂದಿನ ಕಾರ್ಯವನ್ನು ಅತೀ ಶೀಘ್ರದಲ್ಲೇ ಕೈಗೊಳ್ಳಲಿದೆ ಎಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ