ವೀರಾಜಪೇಟೆ, ನ.೧೮: ಅಮ್ಮತ್ತಿ ಸುತ್ತಮುತ್ತಗಳಲ್ಲಿ ಕಾಡಾನೆ, ಹುಲಿ ಹಾಗೂ ಇತರ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ನಷ್ಟ ಸಂಭವಿಸಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಗ್ರಾಮಸ್ಥರು ಭಯಭಿತರಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ರೈತ ಸಂಘದ ಪದಾಧಿಕಾರಿಗಳು ನಿಯೋಗ ತೆರಳಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಅಮ್ಮತ್ತಿ ರೈತ ಸಂಘದ ಗೌರವ ಅಧ್ಯಕ್ಷ ಕಾವಾಡಿಚಂಡ ಯು.ಗಣಪತಿ ಮಾತನಾಡಿ, ಈಗಾಗಲೇ ಪ್ರತಿದಿನ ಮಳೆಯಿಂದಾಗಿ ಭತ್ತದ ಬೆಳೆ ನೆಲಕಚ್ಚಿವೆ ತೋಟದಲ್ಲಿ ಕಾಫಿ ಬೆಳೆ ನಷ್ಟ ಸಂಭವಿಸಿದ್ದು, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರ ಪರಿಹಾರ ಒದಗಿಸಬೇಕಾಗಿದೆ ಎಂದರು.

ಸಂಘದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಮಾತನಾಡಿ, ವೀರಾಜಪೇಟೆ ತಾಲೂಕು ಕಚೇರಿ, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹಣ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ; ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಬೆಳೆ ನಷ್ಟದ ಬಗ್ಗೆ ಕೆಲವೇ ದಿನಗಳಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಂತರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗು ವುದು, ಭ್ರಷ್ಟಾಚಾರ ಬಗ್ಗೆ ವೀರಾಜಪೇಟೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮನವಿ ಸಲ್ಲಿಸುವ ಸಂದರ್ಭ ಅಮ್ಮತ್ತಿ ರೈತ ಸಂಘದ ಪಳಯತಂಡ ಹರಿ, ಮನೆಯಪಂಡ ಪೊನ್ನಪ್ಪ, ಮಾಚಿಮಂಡ ಉತ್ತಪ್ಪ ಸೇರಿದಂತೆ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.