ಮಡಿಕೇರಿ, ನ. ೧೮: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯ ಕೊಡಗು ಜಿಲ್ಲಾ ಸಮಿತಿ (ಎ.ಐ.ಟಿ.ಯು.ಸಿ. ಸಂಯೋಜಿತ)

(ಮೊದಲ ಪುಟದಿಂದ) ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರೂ ಆಶಾ ಕಾರ್ಯಕರ್ತೆ ಯರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ತ್ವರಿತವಾಗಿ ಬೇಡಿಕೆ ಈಡೇರಿಸಬೇಕೆಂದು ಪಟ್ಟುಹಿಡಿದರು.

ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ೩೦೦ಕ್ಕೂ ಹೆಚ್ಚಿನ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ತನಕ ಘೋಷಣೆ ಸಹಿತ ಮೆರವಣಿಗೆ ನಡೆಸಿದರು. ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಕಚೇರಿ ಎದುರು ಕುಳಿತು ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಹಕ್ಕೋತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಿದರು.

ಹಕ್ಕೊತ್ತಾಯಗಳು

ಆಶಾ ಕಾರ್ಯಕರ್ತೆಯರಿಂದ ಇ-ಸಂಜೀವಿನಿ, ಎನ್.ಸಿ.ಡಿ ಸರ್ವೆ, ಕ್ವಾರಂಟೈನ್ ಆ್ಯಪ್‌ಗಳ ಮೂಲಕ ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸಲಾಗುತ್ತಿದೆ ಇದನ್ನು ಕೈಬಿಡಬೇಕು. ಆರ್.ಸಿ.ಹೆಚ್. ಪೋರ್ಟಲ್‌ನಲ್ಲಿ ಎ.ಎನ್.ಸಿ. ಹಾಗೂ ಪಿ.ಎನ್.ಸಿ. ಇನ್ನಿತರ ಹಲವು ಕೆಲಸಗಳ ಡಾಟ ನಮೂದಾಗುತ್ತಿಲ್ಲ. ಇದರಿಂದ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು, ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಫೇಸ್‌ಶೀಲ್ಡ್, ಗ್ಲೌಸ್ ನಿಯಮಿತವಾಗಿ ನೀಡಬೇಕು, ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹ ಧನ ದೊರೆಯುವಂತೆ ಮಾಡಬೇಕು, ಇಲಾಖೆಯ ಸುತ್ತೋಲೆಯ ಅನುಸಾರ ಕ್ಲೆöÊಮ್ ರಿಪೋರ್ಟ್ ಹಾಗೂ ರಿಲೀಸ್ ಕಾಪಿಗಳನ್ನು ಒದಗಿಸಬೇಕು, ಕಫ ಪರೀಕ್ಷೆ ಮಾದರಿ ತರಲು ಎಲ್ಲಾ ಕಡೆ ಆಶಾ ಕಾರ್ಯಕರ್ತೆಯರುಗಳಿಗೆ ಒತ್ತಾಯಿಸಲಾಗುತ್ತಿದ್ದು, ಇದನ್ನು ಕೈಬಿಡಬೇಕು, ಬೆೆÃರೆ ಪ್ರದೇಶಗಳಿಗೆ ನಿಯೋಜಿಸದೆ ನಿಗದಿಪಡಿಸಿದ ಜಾಗದಲ್ಲಿ ಮಾತ್ರ ಕೆಲಸ ಮಾಡಿಸಬೇಕು, ಚೆಕ್‌ಪೋಸ್ಟ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದನ್ನು ನಿಲ್ಲಿಸಬೇಕು, ಕೋವಿಡ್ ನಿಯಂತ್ರಿತ ಚಟುವಟಿಕೆಗಳಲ್ಲಿ ಡಾಟ ತುಂಬಿಸುವುದು, ಲಸಿಕೆ ಸಾಗಿಸುವುದು, ಲಸಿಕಾ ಕೇಂದ್ರಗಳಲಿ, ಸ್ವಾö್ಯಬ್ ತೆಗೆಯುವ ಕೇಂದ್ರಗಳಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು ನಿಲ್ಲಿಸಬೇಕು, ಸರಕಾರ ನಿಯಮದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣೆ ಸಭೆಯನ್ನು ನಡೆಸಬೇಕು, ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೊಳಿಸಿ ಆಶಾ ಕಾರ್ಯಕರ್ತೆಯರ ಮೇಲಿನ ಹೊರೆ ಇಳಿಸಬೇಕು ಎಂಬ ಹಕ್ಕೋತ್ತಾಯಗಳನ್ನು ಆಶಾ ಕಾರ್ಯಕರ್ತೆಯರು ಸರಕಾರದ ಮುಂದಿಟ್ಟರು.

ಕಾರ್ಯಕತೆÀðಯರಿಗೆ ಒತ್ತಡ

ಆಶಾ ಕಾರ್ಯಕರ್ತರುಗಳಿಗೆ ಒತ್ತಡ ಹೇರಿ ಕೆಲಸ ಮಾಡಿಸುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂಘಟನೆಯ ಜಿಲ್ಲಾಧ್ಯಕ್ಷೆ ಪೂರ್ಣಿಮ ಆಗ್ರಹಿಸಿದರು.

ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ಸೂಕ್ತ ಹಾಗೂ ತ್ವರಿತವಾಗಿ ಸ್ಪಂದನ ನೀಡಬೇಕಿದೆ. ಆಶಾ ಕಾರ್ಯಕರ್ತೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ೧೨ ಗಂಟೆಗಳ ಕಾಲ ಕೆಲಸ ಮಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ನಮ್ಮ ಸೌಲಭ್ಯಕ್ಕೆಂದು ಸ್ವಂತ ಹಣದಲ್ಲಿ ಖರೀದಿಸಿದ ಮೊಬೈಲ್‌ನಲ್ಲಿ ಸರಕಾರದ ಕೆಲಸ ಮಾಡಬೇಕಾಗಿದೆ. ಆ್ಯಪ್ ಮೂಲಕ ಹಲವು ಕೆಲಸಗಳನ್ನು ಸರಕಾರ ಮಾಡಿಸುತ್ತಿದೆ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿ ನೆಮ್ಮದಿ ಹಾಳಾಗಿದೆ. ಶ್ರುಶೂಷಕಿಯರು ಮಾಡಬೇಕಾದ ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಂದ ಮಾಡಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ನಮ್ಮಗಳ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ನಾಗಲಕ್ಷಿö್ಮ ಮಾತನಾಡಿ, ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ವಾರಿಯರ್ಸ್ ಆಗಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಲಸಿಕಾ ಅಭಿಯಾನ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಮೂಲ ಕೆಲಸದೊಂದಿಗೆ ಕೋವಿಡ್ ಸಂಬAಧಿತ ಕೆಲಸಗಳು ಹೆಚ್ಚಿನ ಒತ್ತಡ ನೀಡುತ್ತಿದೆ. ಚೆಕ್‌ಪೋಸ್ಟ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಸಮಸ್ಯೆಯಾಗಿದೆ. ಕೋವಿಡ್ ವರದಿ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಪ್ರೋತ್ಸಾಹಧನ ಕಡಿತದ ಮೂಲಕ ಸ್ಥೆöÊರ್ಯವನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಇದರ ನಡುವೆ ತಿಂಗಳಿಡಿ ಮಾಡಿದ ಚಟುವಟಿಕೆಗಳನ್ನು ಪೋರ್ಟಲ್‌ನಲ್ಲಿ ನಮೂದಾಗದ ಹಿನ್ನೆಲೆ ಪ್ರೋತ್ಸಾಹಧನ ಸಂಪೂರ್ಣವಾಗಿ ಸಿಗುತ್ತಿಲ್ಲ. ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನವನ್ನು ಏರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರಿಗೂ ಸಮಸ್ಯೆ ಕುರಿತು ತಿಳಿಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷೆ ಗೀತಾ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಸುಮನ್, ಸಲಹೆಗಾರ ರವಿ. ಬಿ. ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.