ಸುಂಟಿಕೊಪ್ಪ, ನ. ೧೭: ಸರಕಾರಿ ವಾಹನಗಳನ್ನು ಸಾಧಾರಣವಾಗಿ ಪೊಲೀಸರು, ಸಾರಿಗೆ ಅಧಿಕಾರಿಗಳು ಪರಿಶೀಲಿಸುವುದಿಲ್ಲ. ಎಲ್ಲ ದಾಖಲೆ ಸರಿ ಇರಬಹುದೆಂಬ ನಂಬಿಕೆ. ಆದರೆ ಅದೆಷ್ಟೋ ಸರಕಾರಿ ವಾಹನಗಳ ಸ್ಥಿತಿ ಅಯೋಮಯವಾಗಿರುತ್ತದೆ. ಇದಕ್ಕೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ೨ ಜೀಪು ಹಾಗೂ ೧ ಆ್ಯಂಬ್ಯುಲೆನ್ಸ್ ವಾಹನ ಸಾಕ್ಷಿಯಾಗಿವೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬ್ಯುಲೆನ್ಸ್ ವಾಹನವು ಮಂಗಳೂರಿಗೆ ದುರಸ್ತಿಗಾಗಿ ತೆರಳಿ ೪ ತಿಂಗಳು ಕಳೆದರೂ ಇನ್ನೂ ಬಂದಿಲ್ಲ. ಈಗಿರುವ ಬದಲಿ ಆ್ಯಂಬ್ಯುಲೆನ್ಸ್ ವಾಹನ ಹಾಗೂ ಸರಕಾರಿ ೨ ಜೀಪುಗಳಿಗೆ ವಿಮೆ ಹಾಗೂ ಸಾರಿಗೆ ಇಲಾಖೆಯಿಂದ ನೀಡುವ ಸುಸಜ್ಜಿತದಲ್ಲಿರುವ ವಾಹನ (ಎಫ್ಸಿ)
(ಮೊದಲ ಪುಟದಿಂದ) ಎಂಬ ದೃಢೀಕರಣ ಪತ್ರದ ಅವಧಿಯು ಕಳೆದು ಹೋಗಿದ್ದು, ಅದನ್ನು ನವೀಕರಿಸುವ ಗೋಜಿಗೆ ಇಲಾಖೆಯವರು ಇನ್ನೂ ಹೋಗಿಲ್ಲ. ಆಸ್ಪತ್ರೆಯ ವಾಹನಗಳು ತೀರಾ ದುಸ್ಥಿತಿಯಲ್ಲಿದ್ದು, ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ವಾಹನವನ್ನು ಚಾಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ವಾಹನಗಳಿಗೆ ಡೀಸೆಲ್ ಹಾಕಲು ಈ ಆಸ್ಪತ್ರೆಗೆ ಅನುದಾನ ಇಲಾಖೆಯಿಂದ ಲಭ್ಯವಾಗದೆ ಇರುವುದರಿಂದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಉಪಕೇಂದ್ರಗಳಾದ ಹರದೂರು, ನಾಕೂರು ಶಿರಂಗಾಲ, ೭ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಕೆದಕಲ್ ಮೊದಲಾದ ಕೇಂದ್ರದ ಗ್ರಾಮಗಳಿಗೆ ತೆರಳಲು ವೈದ್ಯರು ಹಾಗೂ ಸಿಬ್ಬಂದಿಗಳು ಬಾಡಿಗೆ ವಾಹನವನ್ನು ಅವಲಂಭಿಸಬೇಕಾಗಿರುವುದು ಜಿಲ್ಲಾಡಳಿತ, ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಓಬಿರಾಯನ ಕಾಲದ ಈ ಜೀಪು ಯಾವಾಗ ಬೇಕಾದರೂ ರಸ್ತೆಯಲ್ಲಿ ಕೆಟ್ಟು ನಿಲ್ಲಬಹುದು. ಅಲ್ಲದೆ ಈ ಜೀಪಿನ ವಿಮೆ ಸಹ ಇಲಾಖೆಯವರು ಪಾವತಿಸದೆ ಇರುವುದರಿಂದ ಈ ವಾಹನದಲ್ಲಿ ಚಾಲಕ ಹಾಗೂ ಅಧಿಕಾರಿಗಳು ಭಯಪಡುವಂತಾಗಿದೆ. ಇಲ್ಲಿನ ಆ್ಯಂಬ್ಯುಲೆನ್ಸ್ಸ್ ವಾಹನದ ವಿಮೆ ಅವಧಿ ಮುಗಿದು ಹೋಗಿದ್ದು, ರೋಗಿಗಳನ್ನು ಯಾವ ಧೈರ್ಯದಲ್ಲಿ ಈ ವಾಹನದಲ್ಲಿ ಬೇರೆ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಸರಕಾರವೇ ಇಂಥ ಎಡವಟ್ಟು ಮಾಡಿಕೊಂಡರೆ ಸರಕಾರಿ ಅಧಿಕಾರಿಗಳಿಗೆ ಖಾಸಗಿ ವಾಹನಗಳ ದೃಢತೆಯನ್ನು ಪರಿಶೀಲಿಸಲು ನೈತಿಕತೆ ಇದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.!
ಆರೋಗ್ಯ ಇಲಾಖೆಗೆ ಕಾಯಿಲೆ ಹಿಡಿದರೆ ಇದನ್ನು ಸರಿಪಡಿಸುವವರು ಯಾರೆಂದು ಈ ವಾಹನದಲ್ಲಿ ಪ್ರಯಾಣಿಸಿದ ಮಹಿಳೆಯರು ಪ್ರಶ್ನಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ಓರ್ವ ವೈದ್ಯರೆ ಕರ್ತವ್ಯ ನಿರ್ವಹಿಸುತ್ತಿದ್ದು, ಮತ್ತೊಬ್ಬ ವೈದ್ಯರ ಅವಶ್ಯಕತೆ ಇದೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ನೇಮಕವಾಗಬೇಕಾಗಿದೆ. ಅಲ್ಲದೆ ದಾದಿಯರು ಹಾಗೂ ಡಿ ಗ್ರೂಪ್ ನೌಕರರ ಕೊರತೆಯಿಂದ ಹೋಬಳಿ ಕೇಂದ್ರವಾದ ಈ ಆಸ್ಪತ್ರೆ ಸಮಸ್ಯೆಗಳ ಆಗರದಲ್ಲಿ ಮುಳುಗಿದೆ. ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ, ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಕಲ್ಪಿಸುವ ಅವಶ್ಯಕತೆ ಇದೆ.
- ರಾಜು ರೈ
ವ್ಯವಸ್ಥೆ ಸರಿಪಡಿಸಿ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ೭ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಈ ಗ್ರಾಮವು ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಸುತ್ತ ಮುತ್ತ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಈ ಪ್ರಾಥಮಿಕ ಕೇಂದ್ರವನ್ನೆ ಅವಲಂಭಿಸಿದ್ದಾರೆ. ಉಪಕೇಂದ್ರಗಳಿಗೆ ಜೀಪುಗಳಲ್ಲಿಯೇ ತೆರಳಬೇಕಾಗಿರುವುದರಿಂದ ಸುಸ್ಸಜ್ಜಿತವಾದ ಜೀಪಿನಲ್ಲಿ ಪ್ರಯಾಣಿಸಬೇಕಾಗಿದೆ. ಸಂಬAಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಿದೆ.
- ಎ.ಎಂ.ಶರೀಫ್, ಸುಂಟಿಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ.
ಹೆಚ್ಚಿನ ವೈದ್ಯರು - ಸಿಬ್ಬಂದಿ ಬೇಕಿದೆ
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಜನತೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಭಿತರಾಗಿದ್ದಾರೆ. ಪಟ್ಟಣದ ನಡುವೆ ರಾಷ್ಟಿçÃಯ ಹೆದ್ದಾರಿ ಹಾದುಹೋಗಿದ್ದು ಆಗಿಂದಾಗೆ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲಿರುತ್ತದೆ. ಇಂತಹ ಸಂದರ್ಭಗಳಲ್ಲಿ ತುರ್ತು ಸೇವೆಗೆ ಸುಸಜ್ಜಿತವಾದ ಆ್ಯಂಬ್ಯುಲೆನ್ಸ್ ಹಾಗೂ ಜೀಪು ಅವಶ್ಯಕವಾಗಿರುತ್ತದೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲು ಸಂಬAಧಿಸಿದ ಅಧಿಕಾರಿಗಳು ಮುಂದಾಗಬೇಕು.
ವಹೀದ್ಜಾನ್, ಹಿರಿಯ ನಾಗರಿಕ.
ಶೀಘ್ರದಲ್ಲಿ ಅನುದಾನ
ಕೊಡಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಆ್ಯಂಬ್ಯುಲೆನ್ಸ್ ಮತ್ತು ಇತರ ವಾಹನಗಳ ವಿಮಾ ಕಂತಿನ ಪಾವತಿ ಹಾಗೂ ವಾಹನಗಳ ಸುಸ್ಥಿತಿಯ ಧೃಢೀಕರಣ ನವೀಕರಣವಾಗದೆ ಇರುವ ಬಗ್ಗೆ ಎಲ್ಲ ಆರೋಗ್ಯ ಕೇಂದ್ರಗಳಿಗೆ ಮಾಹಿತಿಗಾಗಿ ಪತ್ರ ಬರೆಯಲಾಗಿದೆ. ಅನುದಾನ ಬರಲು ವಿಳಂಬವಾಗಿರುವುದರಿAದ ಕೆಜೆಡಿಗೆ ವಿಮೆ ಪಾವತಿ ಮಾಡಲಾಗಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನನ್ನ ವಾಹನದ ವಿಮಾ ಕಂತನ್ನು ಇತ್ತೀಚೆಗಷ್ಟೆ ಪಾವತಿಸಲಾಗಿದೆ. ಶೀಘ್ರದಲ್ಲೇ ಅನುದಾನ ಬರಲಿದ್ದು ಎಲ್ಲಾ ವಾಹನಗಳ ವಿಮಾ ಕಂತನ್ನು ಪಾವತಿಸಲಿದ್ದೇವೆ.
ಡಾ. ವೆಂಕಟೇಶ್, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ.