ಚೆಟ್ಟಳ್ಳಿ, ನ. ೧೬: ನಾಲ್ಕೆöÊದು ಬಿಳಿ ಚೀಲದಲ್ಲಿ ತುಂಬಿದ್ದ ಗಬ್ಬು ನಾರುತ್ತಿದ್ದ ವಸ್ತುವನ್ನು ಮುಖ್ಯರಸ್ತೆ ಬದಿಯಲ್ಲಿ ಎಸೆದಿರುವ ಬಗ್ಗೆ ತೋಟದ ಮಾಲೀಕರು ಪೊಲೀಸರಿಗೆ ಹಾಗೂ ಚೆಟ್ಟಳ್ಳಿ ಪಂಚಾಯಿತಿಗೆ ಮಾಹಿತಿ ನೀಡಿದ ಮೇರೆ ಪರಿಶೀಲಿಸಿ ಕಸವನ್ನು ಸ್ಥಳದಲ್ಲೇ ಮುಚ್ಚಿ ಹಾಕಿದ ಘಟನೆ ನಡೆದಿದೆ.

ಚೆಟ್ಟಳ್ಳಿ-ಮಡಿಕೇರಿ ಮುಖ್ಯರಸ್ತೆಯ ಅಭ್ಯಾಲದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಡೆಗೋಡೆಯ ಬದಿಯಲ್ಲಿ ಗಬ್ಬು ನಾರುತ್ತಿರುವ ಬಿಳಿ ಚೀಲಗಳಿರುವುದನನು ಪಕ್ಕದ ತೋಟದ ಮಾಲೀಕ ಕಡೇಮಾಡ ವಿನ್ಸಿ ಅಪ್ಪಯ್ಯ ಗಮನಿಸಿ ಚೆಟ್ಟಳ್ಳಿ ಪೊಲೀಸ್ ಠಾಣೆಗೆ ಹಾಗೂ ಗ್ರಾಮ ಪಂಚಾಯಿತಿಗೆ ತಿಳಿಸಿದ್ದಾರೆ. ಪಂಚಾಯಿತಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಿಳಿ ಚೀಲದಲ್ಲಿ ಇರುವುದು ಕೋಳಿ ತ್ಯಾಜ್ಯವೆಂದು ತಿಳಿಯಿತು. ಹಲವು ದಿನಗಳಾದ್ದರಿಂದ ಗಬ್ಬುನಾರುತ್ತಿದ್ದು, ತ್ಯಾಜ್ಯದ ಚೀಲವನ್ನು ವಿಲೇವಾರಿ ಮಾಡಲಾಗದೆ ಅಲ್ಲೇ ಮಣ್ಣು ಹಾಕಿ ಮುಚ್ಚಲಾಯಿತು. ಕೋಳಿ ತ್ಯಾಜ್ಯ ಹಾಕಿದವರನ್ನು ಕಂಡು ಹಿಡಿಯುವಂತೆ ತೋಟದ ಮಾಲೀಕ ವಿನ್ಸಿ ಅಪ್ಪಯ್ಯ ಪೊಲೀಸರನ್ನು ಒತ್ತಾಯಿಸಿದ್ದಾರೆ. - ಕಾಳಯ್ಯ