ಮಡಿಕೇರಿ, ನ. ೧೬: ರಾಜಕೀಯ ಹಾಗೂ ಬಣಗಳ ಒಳಸುಳಿಗೆ ಸಿಲುಕಿದ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ ತನ್ನ ಉದ್ದೇಶ ಮರೆತಿದೆ. ಸಮ್ಮೇಳನಗಳು ಅರ್ಥ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ತಾ. ೨೧ ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಆತ್ಮಾವಲೋಕನ ಮಾಡಿಕೊಂಡು ಮುಂದಿನ ಯೋಜನೆ ರೂಪಿಸಿ ಪರಿಷತ್ ಅನ್ನು ಮುನ್ನಡೆಸಬೇಕೆಂಬ ಅಭಿಪ್ರಾಯ ಹಾಗೂ ಸಲಹೆಗಳು ಕೊಡಗು ಪ್ರೆಸ್ ಕ್ಲಬ್ ವತಿಯಿಂದ ‘ಕನ್ನಡ ಸಾಹಿತ್ಯ ಪರಿಷತ್..ಅಂದು, ಇಂದು, ಮುಂದೆ.’ ಎಂಬ ವಿಷಯದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಜೊತೆಗೆ ಸಾಹಿತಿಗಳೇ ಅಧ್ಯಕ್ಷ ಪಟ್ಟ ಅಲಂಕರಿಸಬೇಕೆAಬ ವಾದ ಒಂದೆಡೆಯಾದರೆ, ಕನ್ನಡ ಪ್ರೇಮಿಗಳು ಸಂಘಟನೆಯಲ್ಲಿ ತೊಡಗಿಸಿಕೊಂಡರೆ ತಪ್ಪಲ್ಲ ಎಂಬ ಪ್ರತಿಪಾದನೆ ಮತ್ತೊಂದೆಡೆ ಮಂಡನೆಯಾಯಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಮಾತನಾಡಿ, ೧೯೧೫ರಲ್ಲಿ ಆರಂಭಗೊAಡ ಪರಿಷತ್ತು ಅನ್ನು ಧೀಮಂತ ಸಾಹಿತಿಗಳು ಮುನ್ನಡೆಸಿದ್ದಾರೆ. ಆದರೆ, ಇಂದು ಸಂಘಟಕರು, ರಾಜಕೀಯ ಹಿನ್ನೆಲೆಯುಳ್ಳವರು, ಪ್ರಬಲರ ಹಸ್ತಕ್ಷೇಪದಿಂದ ಸಾಹಿತ್ಯ ಪರಿಷತ್ತು ನೈಜ ಅರ್ಥ ಕಳೆದುಕೊಂಡಿದೆ. ರಾಜಕೀಯ ಹಾಗೂ ಬಣಗಳ ನಿಲುವಿನಲ್ಲಿ ಮತದಾನ ನಡೆಯುತ್ತಿರುವುದು ವಿಷಾದನೀಯ. ಸಮ್ಮೇಳನಗಳನ್ನು ಆಡಂಬರವಾಗಿ ಆಯೋಜಿಸುವುದೇ ಸಾಧನೆ ಎಂದು ಅಧ್ಯಕ್ಷರುಗಳು ಅಂದುಕೊAಡಿದ್ದಾರೆ. ಭಾಷೆ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ ಅರ್ಥ ಕಳೆದುಕೊಂಡಿದೆ. ಭಾಷೆ ಹಾಗೂ ಸಾಹಿತ್ಯಕ್ಕೆ ಯಾವುದೇ ಮಟ್ಟವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಕನ್ನಡದ ಪರಿಸ್ಥಿತಿ ಹದಗೆಟ್ಟಿದೆ. ಜನರು ಇದು ನಮ್ಮ ಸಮಸ್ಯೆ ಎಂದು ಅರಿತುಕೊಳ್ಳಬೇಕು. ಇಂದಿನ ದಿನದಲ್ಲಿ ಭಾಷೆ ವ್ಯಾಪಾರೀಕರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೊದಲ ಸಮ್ಮೇಳನಕ್ಕೂ ಇಂದು ನಡೆಯುವ ಸಮ್ಮೇಳನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ಸ್ವಂತ ಖರ್ಚಿನಲ್ಲಿ ಸಮ್ಮೇಳನಕ್ಕೆ ತೆರಳಿ ಸಾಹಿತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂದು ಉದ್ಘಾಟನೆ ನಂತರ ಜನರಿರುವುದಿಲ್ಲ. ಬರಹಗಾರರ ಭಾಗವಹಿಸುವಿಕೆ ಕಡಿಮೆಯಾಗಿದೆ. ಸಾಹಿತಿಗಳನ್ನು ಗೌರವಿಸಲು ಸಮ್ಮೇಳನ ಹುಟ್ಟು ಹಾಕಲಾಯಿತು. ಈ ಮೂಲಕ ಸಾಹಿತ್ಯ ಚಟುವಟಿಕೆ ನಡೆಸಬಹುದೆಂಬ ಚಿಂತನೆ ಇತ್ತು. ಇದೀಗ ಮೆರವಣಿಗೆ, ಗೊಂಬೆ ಕುಣಿತ, ರಾಜಕಾರಣಿಗಳ ಭಾಷಣದ ಮೂಲಕ ಸಮ್ಮೇಳನ ನಡೆಸುವ ಕಾಲ ಬಂದಿದೆ. ಇದು ಬದಲಾಗಬೇಕು ಎಂದ ಅವರು, ಕನ್ನಡ ಪುಸ್ತಕ ಓದಿನ ಜೊತೆಗೆ ಕಲಿಕೆಗೆ ನಮ್ಮನ್ನೂ ನಾವು ಒಡ್ಡಿಕೊಳ್ಳಬೇಕು. ಮಾರಾಟದ ಆಧಾರದಲ್ಲಿ ಪುಸ್ತಕಗಳ ಶ್ರೇಷ್ಠತೆ ಅಳೆಯಬಾರದು. ಸಂಸ್ಕೃತಿ ಶಿಥಿಲವಾದರೆ ಎಲ್ಲಾ ಕ್ಷೇತ್ರದಲ್ಲೂ ಭಾಷಾ ಬಳಕೆ ಕುಸಿಯುತ್ತದೆ ಎಂದರು.
ಹಿರಿಯ ಸಾಹಿತಿ ಭಾರಧ್ವಜ್ ಕೆ. ಆನಂದ ತೀರ್ಥ ಮಾತನಾಡಿ, ಪರಿಷತ್ತಿನೊಳಗೆ ರಾಜಕೀಯ ಹಸ್ತಕ್ಷೇಪ, ಗುಂಪುಗಾರಿಕೆ ಇದೆ ಎಂಬ ವಾದವಿದೆ. ಪರಿಷತ್ತು ಮೂಲಕ ಕನ್ನಡ ಕಟ್ಟುವ ಕೆಲಸವಾಗಬೇಕು. ಕನ್ನಡದಿಂದ ನಾವು ಎಂಬುದುನ್ನು ತಿಳಿದುಕೊಳ್ಳಬೇಕು. ಸಮ್ಮೇಳನಗಳು ಅರ್ಥಗರ್ಭಿತವಾಗಿ ಆಯೋಜನೆಯಾಗಬೇಕು. ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು. ಯುವ ಸಾಹಿತಿ ನೌಷದ್ ಜನ್ನತ್ ಮಾತನಾಡಿ, ನಾಡು-ನುಡಿ ಉಳಿವಿಗೆ ಬೇರು ಮಟ್ಟದಿಂದ ಕೆಲಸ ಮಾಡಬೇಕು. ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮ ಪರಿಷತ್ನಿಂದ ಆಗಬೇಕು ಎಂದರು.
ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ, ಗಡಿಯಲ್ಲಿ ಬೇರೆ ಭಾಷೆಗಳ ಬಳಕೆ ಹೆಚ್ಚಾಗಿ ಕನ್ನಡ ನಾಶವಾಗುತ್ತಿದೆ. ಅಲ್ಲಿ ಕನ್ನಡ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಕನ್ನಡದ ಉಳಿವಿಗೆ ಕಾರ್ಯಕ್ರಮ ರೂಪಿಸುವಲ್ಲಿ ಕ.ಸಾ.ಪ. ಸಂಪೂರ್ಣ ವಿಫಲವಾಗಿದೆ. ರಾಜಕೀಯ ಚುನಾವಣೆಯಂತೆ ಸಾಹಿತ್ಯ ಪರಿಷತ್ ಚುನಾವಣೆ ನಡೆಯುತ್ತಿರುವುದು ವಿಷಾದನೀಯ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಹಲವರು ದುಡಿದಿದ್ದಾರೆ. ಸಮ್ಮೇಳನಗಳು ರಾಜಕೀಯ ದೊಂಬರಾಟವಾಗಿ ಪರಿವರ್ತಿತವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕ.ಸಾ.ಪ ಕನ್ನಡಕ್ಕಾಗಿ ಏನು ಮಾಡುತ್ತಿದೆ ಎಂಬ ಪ್ರಶ್ನೆ ಹುಟ್ಟಿಸುವಂತೆ ಮಾಡುತ್ತಿದೆ ಎಂದರು.
ಕನ್ನಡ ಉಪನ್ಯಾಸಕ ಡಾ.ಕರುಣಾಕರ್ ಮಾತನಾಡಿ, ಮಾತೃಭಾಷೆ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಇವತ್ತಿನ ಕರ್ನಾಟಕ ಹಾಗೂ ಕನ್ನಡದ ಪರಿಸ್ಥಿತಿ ಬದಲಾವಣೆಯಾಗಿದೆ. ಅದನ್ನು ತಡೆಯಲು ಯಾರಿಂದ ಆಗುವುದಿಲ್ಲ. ಹೊಸ ತಲೆಮಾರಿನ ಕ್ರಮ ಬದಲಾಗಿದೆ. ಇದನ್ನು ಕ.ಸಾ.ಪ ಅರಿತುಕೊಳ್ಳಬೇಕು. ಕ್ರಿಯಾಶೀಲ ಚಿಂತನೆ ನಡೆಸಬೇಕು. ಸಾಹಿತ್ಯ ಪರಿಷತ್ತಿನಿಂದ ಕಮ್ಮಟ ನಡೆಸಿ ಯುವಜನರಿಗೆ ಸಾಹಿತ್ಯ ಸಂಬAಧ ತರಬೇತಿ ನೀಡಬೇಕು. ಓದು, ಬರಹದಲ್ಲಿ ಆಸಕ್ತಿ ತರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೊಡಗು ಪ್ರೆಸ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ೬ ಲಕ್ಷ ಜನಸಂಖ್ಯೆ ಇರುವ ಕೊಡಗಿನಲ್ಲಿ ೨೫೦೦ ಮತದಾರರು ಮಾತ್ರ ಇದ್ದಾರೆ. ಈ ಹಿನ್ನೆಲೆ ಸಾಹಿತ್ಯ ಪರಿಷತ್, ಹೇಗಿತ್ತು, ಮುಂದೆ ಹೇಗಿರಬೇಕೆಂಬ ದೃಷ್ಟಿಕೋನದಲ್ಲಿ ಸಂವಾದ ಆಯೋಜಿಸಲಾಗಿದೆ ಎಂದರು.
ಕ್ಲಬ್ ನಿರ್ದೇಶಕ ದಿವಾಕರ್ ಜಾಕಿ ನಿರೂಪಿಸಿ, ವಿಶ್ವಕುಂಬೂರು ಪ್ರಾರ್ಥಿಸಿ, ನವೀನ್ ಡಿಸೋಜ ಸ್ವಾಗತಿಸಿ, ಪ್ರಸೀದ್ ಗೌಡ ವಂದಿಸಿದರು.