ಮಡಿಕೇರಿ, ನ. ೧೬: ರಾಜ್ಯ ವಿಧಾನ ಪರಿಷತ್‌ಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾರು ಎಂಬದು ಭಾರೀ ಕುತೂಹಲ ಮೂಡಿಸುತ್ತಿದೆ. ಈ ಕುರಿತಾಗಿ ಬಿಜೆಪಿ, ಕಾಂಗ್ರೆಸ್‌ನಿAದ ಈ ತನಕ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಎಲ್ಲವೂ ಅಂತೆ... ಕಂತೆಗಳಲ್ಲೇ ಉಳಿದಿದ್ದು, ಅಧಿಕೃತ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಗುಟ್ಟು ಗೌಪ್ಯವಾಗಿಯೇ ಉಳಿದಿದೆ.

ಹಾಲಿ ಎಂಎಲ್‌ಸಿ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಅಧಿಕಾರಾವಧಿ ಜನವರಿ ೫ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಈ ಸ್ಥಾನಕ್ಕೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ ೧೦ ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನವೆಂಬರ್ ೨೩ ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತಾ. ೧೬ ರಿಂದ ಆರಂಭಗೊAಡಿದ್ದು, ಮೊದಲ ದಿನದಂದು ಯಾರೂ ನಾಮಪತ್ರ ಸಲ್ಲಿಸಿಲ್ಲ. ಜಿಲ್ಲೆಯಲ್ಲಿ ಬಹುತೇಕ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಮಾತ್ರ ಪೈಪೋಟಿ ಖಚಿತವಾಗಿದೆ. ಜೆಡಿಎಸ್, ಎಸ್‌ಡಿಪಿಐ, ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆಯ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಸ್ಪರ್ಧಿಸಿದರೂ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಚುನಾಯಿತ ಸದಸ್ಯರ ಸಂಖ್ಯೆಯನ್ನು ಅವಲೋಕಿಸಿದಲ್ಲಿ ಇವರ ಸ್ಪರ್ಧೆ ಅಷ್ಟಕಷ್ಟೆ ಎಂಬAತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ - ಎಸ್‌ಡಿಪಿಐ ನಿಲುವೇನು ಎಂಬದೂ ಕುತೂಹಲವಾಗಿದೆ.

ಬಿಜೆಪಿ ಪಕ್ಷದಲ್ಲಿ ಹಲವು ಆಸಕ್ತ ಅಭ್ಯರ್ಥಿಗಳ ಪಟ್ಟಿ ಇದೆ. ಸುಮಾರು ೧೪ ಮಂದಿಯ ಹೆಸರು ಆರಂಭದಲ್ಲಿ ಸಲ್ಲಿಕೆಯಾಗಿತ್ತು. ಇದೀಗ ಇದು ಅಂತಿಮಗೊಳ್ಳುವತ್ತ ಸಾಗಿದ್ದು, ಇಲ್ಲಿ ಪಕ್ಷದ ಹೈಕಮಾಂಡ್‌ನ ತೀರ್ಮಾನವೇ ಅಂತಿಮವಾಗಲಿದೆ. ನಿನ್ನೆ ಕೂಡ ಪಕ್ಷದ ಕೋರ್ ಕಮಿಟಿ ಸಭೆ ಜರುಗಿದೆ. ಅಭ್ಯರ್ಥಿ ಆಯ್ಕೆಗೆ ಸಂಬAಧಿಸಿದAತೆ ರಾಜ್ಯಮಟ್ಟದಲ್ಲಿ ಕೆಲವು ತೀರ್ಮಾನವಾಗಿದೆ ಎನ್ನಲಾಗಿದ್ದು, ಅಂತಿಮ ಪಟ್ಟಿಯಲ್ಲಿ ಸುಮಾರು ಮೂರು ಮಂದಿಯ ಹೆಸರು ಮಾತ್ರ ಇದೆ ಎನ್ನಲಾಗಿದೆ. ಆದರೆ ಈ ಪಟ್ಟಿ ಕೂಡ ಬಿಜೆಪಿ ಸಂಸದೀಯ ಮಂಡಳಿಗೆ ರವಾನೆಯಾಗಲಿದ್ದು, (ಪಾರ್ಲಿಮೆಂಟರಿ ಕಮಿಟಿ) ಸಂಸದೀಯ ಮಂಡಳಿ ಅಧಿಕೃತ ಅಭ್ಯರ್ಥಿಯನ್ನು ಪ್ರಕಟಿಸಲಿದೆ. ತಾ. ೧೭ ರಂದು (ಇಂದು) ಈ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಹಾಲಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಕಳೆದ ಬಾರಿ ಟಿಕೆಟ್ ಕೈತಪ್ಪಿದ್ದ ಇವರ ಸಹೋದರ ಸುಜಾ ಕುಶಾಲಪ್ಪ ಹಾಗೂ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ಹೆಸರು ಇದೆ ಎಂಬ ಮಾತು ಕೇಳಿ ಬಂದಿದೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಟಿಕೆಟ್ ಆಸಕ್ತರಾಗಿದ್ದರೂ ಇಲ್ಲಿ ಪ್ರಬಲ ಪೈಪೋಟಿ ಇಲ್ಲವೆನ್ನಲಾಗಿದೆ. ಈಗಾಗಲೇ ಆಸಕ್ತರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ‘ಶಕ್ತಿ’ಗೆ ತಿಳಿದು ಬಂದAತೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ನೆರೆಜಿಲ್ಲೆಯ ಪ್ರಬಲ ಅಭ್ಯರ್ಥಿಯೋರ್ವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಹಾಸನ ಜಿಲ್ಲೆಯವರಾದ ಮಾಜಿ ಸಚಿವ ಎ. ಮಂಜು ಅವರ ಪುತ್ರ ಡಾ|| ಮಂಥರ್‌ಗೌಡ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಇವರೊಂದಿಗೆ ಕೆ.ಎಂ. ಲೋಕೇಶ್ ಅವರ ಹೆಸರಿದ್ದರೂ ಮಂಥರ್‌ಗೌಡ ಪ್ರಬಲರಾಗಿದ್ದಾರೆ. ಮಂಥರ್‌ಗೌಡ ಮಾಜಿ ಸಚಿವರ ಪುತ್ರರೂ ಆಗಿದ್ದು, ಹಾಸನದ ರಾಮನಾಥಪುರ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯರೂ ಆಗಿದ್ದಾರೆ.

ನಾಮಪತ್ರ ಸಲ್ಲಿಕೆಗೆ ತಾ. ೨೩ರವರೆಗೆ ಅವಕಾಶವಿದ್ದರೂ ತಾ. ೨೧ ಹಾಗೂ ೨೨ ರಜಾ ದಿನವಾಗಿದೆ. ಉಳಿದ ದಿನದಲ್ಲಿ ಈ ಕಾರ್ಯ ನಡೆಯಬೇಕಿದ್ದು, ರಾಜಕೀಯ ಬಿರುಸುಗೊಳ್ಳುತ್ತಿದೆ.