ಬಿಟ್ ಕಾಯಿನ್; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ನ. ೧೫: ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕೃಷ್ಣ / ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ. ಬಿಟ್ ಕಾಯಿನ್ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹಗರಣದ ಸೂತ್ರಧಾರ ಎಂಬ ಆರೋಪ ಹೊಂದಿರುವ ಶ್ರೀಕಿ ಕಳೆದ ವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಸೋಮವಾರ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದು, ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಶಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಬಿಟ್ ಕಾಯಿನ್ ಹಗರಣ ಸ್ಪೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು, ಪೊಲೀಸರ ನಡವಳಿಕೆ ಸಂಶಯಗಳಿಗೆ ಕಾರಣವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ಆ ಸಮಯದಲ್ಲಿ ಶ್ರೀಕಿ ತಂದೆಯೇ ಪತ್ರ ಬರೆದು ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು ಎನ್ನುವುದು ಗಮನಾರ್ಹ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಪತ್ನಿಯ ಎದುರೇ ಆರ್‌ಎಸ್‌ಎಸ್ ಕಾರ್ಯಕರ್ತನ ಬರ್ಬರ ಹತ್ಯೆ

ಪಾಲಕ್ಕಾಡ್, ನ. ೧೫: ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನೋರ್ವನನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸೋಮವಾರ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತನ ಪತ್ನಿಯ ಎದುರಲ್ಲೇ ಆತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯು ತಿಳಿಸಿದೆ. ೨೭ ವರ್ಷ ಪ್ರಾಯದ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ರನ್ನು ಆತನ ಪತ್ನಿಯ ಎದುರಲ್ಲೇ ಸೋಮವಾರ ಬೆಳಗ್ಗೆ ಸುಮಾರು ೯ ಗಂಟೆಗೆ ಹತ್ಯೆ ಮಾಡಲಾಗಿದೆ. ಸಂಜಿತ್ ತನ್ನ ಪತ್ನಿಯು ಉದ್ಯೋಗ ಮಾಡುವ ಸ್ಥಳಕ್ಕೆ ಆಕೆಯನ್ನು ಬಿಟ್ಟು ಬರಲು ಎಂದು ನಿವಾಸದಿಂದ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಂಜಿತ್‌ನನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಈ ನಡುವೆ ಬಿಜೆಪಿಯು ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸಂಜಿತ್ ಹಾಗೂ ಆತನ ಪತ್ನಿ ದ್ವಿಚಕ್ರ ವಾಹನದಲ್ಲಿ ಎಲಪ್ಪುಲ್ಲಿಯಿಂದ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ವಾಹನದಲ್ಲಿ ಬಂದು ದ್ವಿಚಕ್ರ ವಾಹನಕ್ಕೆ ಗುದ್ದಿದ್ದಾರೆ. ಸಂಜಿತ್ ದ್ವಿಚಕ್ರ ವಾಹನ ಪಲ್ಟಿಯಾಗಿ ಸಂಜಿತ್ ಕೆಳಕ್ಕೆ ಬಿದ್ದ ಕೂಡಲೇ ಪತ್ನಿಯ ಎದುರೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯು ಈ ಘಟನೆಯ ಬಗ್ಗೆ ವಿವರಿಸಿದೆ.

ಬೆಂಗಳೂರಲ್ಲಿ ಗುಡುಗು ಸಹಿತ ಮಳೆ ಆರ್ಭಟ

ಬೆಂಗಳೂರು, ನ. ೧೫: ಬೆಂಗಳೂರು ನಗರದಲ್ಲಿ ಸಂಜೆಯ ಬಳಿಕ ಗುಡುಗು ಸಹಿತ ಮಳೆಯು ಆರ್ಭಟಿಸುತ್ತಿದೆ. ಈಗಾಗಲೇ ನಗರದ ಜನರು ಮಳೆ ಬಿಟ್ಟರೆ ಸಾಕು ಎಂದು ಹಲಬುತ್ತಿದ್ದರೆ, ಸೋಮವಾರ ಸಂಜೆ ೪ ಗಂಟೆಯ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ಆರಂಭವಾಯಿತು. ಗಡುಗಿನ ಆರ್ಭಟವೂ ಜೋರಾಗಿತ್ತು. ಸಂಜೆ ೮ ಗಂಟೆಯ ತನಕ ಧಾರಾಕಾರ ಮಳೆ ಸುರಿದಿದ್ದು, ಜನರು ಪರದಾಡುವಂತಾಯಿತು.

ಮಲೆನಾಡಿನಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು, ನ. ೧೫: ತಾ. ೧೫ ರಿಂದ ೧೭ರ ತನಕ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂಡಮಾನ್ ಭಾಗದಲ್ಲಿ ಉಂಟಾಗಿದ್ದ ವಾಯಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಮಳೆಯಾಗಲಿದೆ. ಬಳಿಕ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಳೆಯಿಂದ ಹಾನಿ ಉಂಟಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.