*ಗೋಣಿಕೊಪ್ಪ, ನ. ೧೫: ಲಯನ್ಸ್ ಸಂಸ್ಥೆಯು ಸಾರ್ವಜನಿಕರ ಸೇವೆಗಾಗಿ ಹಲವು ಜನಪರ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೆ ತಂದು ಸಾಮಾಜಿಕ ಕಾಳಜಿಯ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಹೇಳಿದರು.
ಲಯನ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ನೀಡಿರುವ ಡಯಾಲಿಸಿಸ್ ಯಂತ್ರದಿAದ ಸಾಕಷ್ಟು ಜೀವ ಉಳಿಸಿದ ತೃಪ್ತಿ ದೊರೆತಿದೆ. ಹೊರ ಜಿಲ್ಲೆ ಆಸ್ಪತ್ರೆಯನ್ನು ಅವಲಂಭಿಸಿದ್ದ ರೋಗಿಗಳು ಸ್ಥಳಿಯವಾಗಿ ನಿತ್ಯ ಡಯಾಲಿಸಿಸ್ ಲಾಭ ಪಡೆದುಕೊಳ್ಳುತ್ತಿದ್ದಾರೆ. ಸಮಯ, ಹಣ, ಪ್ರಯಾಣದ ತೊಂದರೆ ಇಲ್ಲದೆ, ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು. ಆರೋಗ್ಯ, ಶಿಕ್ಷಣ, ಸಾಮಾಜಿಕವಾಗಿ ಲಯನ್ಸ್ ಸಂಸ್ಥೆ ಸೇವಾ ಕಾರ್ಯ ಮುಂದುವರಿಯುತ್ತಿದೆ.
ಎಲ್ಲಾ ವರ್ಗದವರಿಗೆ ಪ್ರಯೋಜನವಾಗುವಂತೆ ಗ್ಯಾಸ್ ಮೂಲಕ ಶವ ಸುಡುವ ಯಂತ್ರವನ್ನು ಸಾರ್ವಜನಿಕ ಸೇವೆಗೆ ನೀಡಿರುವುದರಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ಅರಿತು ಸೇವೆ ನೀಡಲು ಯೋಜನೆ ರೂಪಿಸಿಕೊಂಡಿರುವುದು ಫಲ ನೀಡುತ್ತಿದೆ. ಶಿಕ್ಷಣ ಸಂಸ್ಥೆಯಿAದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.
ಮಂಗಳೂರು ವ್ಯಾಪ್ತಿಯಲ್ಲಿ ಪ್ರಮುಖ ಮೂರು ಯೋಜನೆ ರೂಪಿಸಿದ್ದು, ಬಿ.ಸಿ ರಸ್ತೆಯ ಬದಿಗಳಲ್ಲಿ ೫೦೦ ಸಸಿ ನೆಡುವುದು ಮತ್ತು ಪೋಷಿಸುವ ಯೋಜನೆ ಸುಮಾರು ೭ ಲಕ್ಷ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ವೆನ್‌ಲಾಕ್ ಆಸ್ಪತ್ರೆಯಲ್ಲಿ ಕೃತಕ ಕಾಲು, ಕೈ ಜೋಡಣೆ ಯಂತ್ರವನ್ನು ಮೇಲ್ದರ್ಜೆಗೇರಿಸಲು ೨೩ ಲಕ್ಷ, ಆಸ್ಪತ್ರೆಗೆ ಆಹಾರ ಒದಗಿಸುತ್ತಿರುವ ಸಂಸ್ಥೆಗೆ ಪ್ರೋತ್ಸಾಹ ನೀಡಲು ಮೊಬೈಲ್ ಕಿಚ್ಚನ್ ಸೇವೆಗೆ ೧೮ ಲಕ್ಷ, ಮಕ್ಕಳ ಕ್ಯಾನ್ಸರ್ ತಡೆಗೆ ರೋಗಿಗಳ ಜತೆಯಲ್ಲಿರುವವರಿಗೆ ಸವಲತ್ತು ಕಲ್ಪಿಸಲು ೨೫ ಲಕ್ಷ ರೂ. ವಿನಿಯೋಗಿಸಲಾಗುವುದು. ಸದಸ್ಯರ ಸೇವಾ ಕಾಳಜಿ ಯಿಂದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಗೋಣಿಕೊಪ್ಪ ಲಯನ್ಸ್ ಅಧ್ಯಕ್ಷ ಪಾರುವಂಗಡ ಜೀವನ್, ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ, ಖಜಾಂಜಿ ಚೆಪ್ಪುಡೀರ ಬೋಪಣ್ಣ, ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ, ಲಯನ್ಸ್ ಟ್ರಸ್ಟ್ ಉಪಾಧ್ಯಕ್ಷ ಬೋಸ್ ಪೆಮ್ಮಯ್ಯ, ಜಿಲ್ಲಾ ಸಂಘಟಕಿ ಯಮುನಾ ಚೆಂಗಪ್ಪ, ಪ್ರಮುಖರಾದ ದಿವ್ಯಶೆಟ್ಟಿ, ಸಚಿನ್ ಬೆಳ್ಯಪ್ಪ ಇದ್ದರು.