ಶನಿವಾರಸಂತೆ, ನ. ೧೬: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಮತ್ತು ಚಿಕ್ಕಾರ ಗ್ರಾಮಗಳಲ್ಲಿ ಕಾಡಾನೆಗಳಿಂದ ಕಾಫಿ ತೋಟ ಮತ್ತು ಗದ್ದೆಗಳು ನಾಶವಾಗಿವೆ.
ಕಾಡಾನೆಗಳು ಕಾಫಿ ತೋಟ, ಭತ್ತದ ಗದ್ದೆಗಳಿಗೆ ಇಳಿದು ನಾಶಪಡಿಸುತ್ತಿವೆ. ಬೆಳೆಗಳು ಹಾಳಾಗಿವೆ. ಆನೆಗಳ ಹಾವಳಿ ತಪ್ಪಿಸಲು ಆನೆ ಕಂದಕ ಅಥವಾ ಸೋಲಾರ್ ಬೇಲಿಗಳನ್ನು ನಿರ್ಮಿಸಿ ಮುಕ್ತಿ ದೊರಕಿಸಿಕೊಡಬೇಕು. ಅರಣ್ಯ ಇಲಾಖೆ ಕೊಡುವ ಪರಿಹಾರ ಅವೈಜ್ಞಾನಿಕವಾಗಿದ್ದು, ಇದನ್ನು ಪರಿಷ್ಕರಿಸಿ ಹೆಚ್ಚು ಮಾಡುವಂತೆ ಬೆಳೆಗಾರರು, ರೈತರುಗಳಾದ ಕೂಗೂರು ಗ್ರಾಮದ ಕುಟ್ಟಪ್ಪ, ಕೊಮಾರಪ್ಪ, ನಾಗರಾಜ್, ಜಯಪ್ಪ, ಪ್ರವೀಣ್, ವಿಠಲ್, ದೇವರಾಜ್, ವಿಜಯಕುಮಾರ್, ಜಯಪ್ಪ, ಚಿಕ್ಕಾರ ಗ್ರಾಮದವರಾದ ಹೇಮಂತ್, ಪ್ರಸಾದ್, ಸುನಿ ಹಾಗೂ ಇತರ ಗ್ರಾಮಸ್ಥರು ಶನಿವಾರಸಂತೆ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಆಗಮಿಸಿ, ಅರಣ್ಯ ವಲಯಾಧಿಕಾರಿ ಪ್ರಫುಲ್ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.