*ಗೋಣಿಕೊಪ್ಪ, ನ. ೧೫: ಪ್ರಕೃತಿ ವಿಕೋಪ ಮತ್ತು ಮಳೆ ಹಾನಿಯಿಂದ ಬೆಳೆ ನಷ್ಟಗೊಂಡಿರುವ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಭರವಸೆ ನೀಡಿದರು.

ಕೊಡಗು ಬೆಳೆಗಾರರ ಒಕ್ಕೂಟ ಪೊನ್ನಂಪೇಟೆ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿ ಅತಿವೃಷ್ಟಿಗೊಳಗಾದ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದ ಸಂದರ್ಭ ಮಾತನಾಡಿದರು.

ಸತತ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟಗೊಂಡು ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ ಬೆಳೆಗಾರರಿಗೆ ಈ ಪ್ರಸಕ್ತ ವರ್ಷವೂ ಅತಿವೃಷ್ಟಿಯಿಂದ ಬೆಳೆ ನಷ್ಟ ಉಂಟಾಗಿವೆ. ನಿರಂತರ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ನಷ್ಟ ಉಂಟಾಗಿವೆ. ಕಳೆದ ವರ್ಷಕ್ಕಿಂತ ಅಧಿಕ ಮಳೆ ಪ್ರಸಕ್ತ ವರ್ಷ ಆಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಆಗುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಎಲ್ಲಾ ಹಿನ್ನೆಲೆಯನ್ನು ಪರಿಗಣಿಸಿ ಜಿಲ್ಲೆಯನ್ನು ಅತಿವೃಷ್ಠಿ ಪ್ರದೇಶವೆಂದು ಘೋಷಿಸಲು ಸರ್ಕಾರದ ಗಮನ ಸೆಳೆಯಲಾಗುವುದು. ಈಗಾಗಲೇ ಮಡಿಕೇರಿ ತಾಲೂಕನ್ನು ಮಾತ್ರ ಅತಿವೃಷ್ಠಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಉಳಿದ ನಾಲ್ಕು ತಾಲೂಕುಗಳನ್ನು ಅತಿವೃಷ್ಟಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೆಳೆ ನಷ್ಟ ಸಮೀಕ್ಷೆಯನ್ನು ಕಾಫಿ ಮಂಡಳಿ ಸೇರಿದಂತೆ ವಿವಿಧ ಇಲಾಖೆ ಕೈಗೊಂಡಿದ್ದು, ವರದಿಯನ್ನು ಪರಿಶೀಲಿಸಿ ಬೆಳೆನಷ್ಟಗೊಂಡಿರುವ ಜಿಲ್ಲೆಯ ಗ್ರಾಮಗಳ ಹೆಸರನ್ನು ಪ್ರಕಟಿಸಿ ಆಯಾ ಗ್ರಾಮಗಳ ರೈತರು/ಬೆಳೆಗಾರರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬೆಳೆಗಾರರ ಪರ ಸಾಂತ್ವನದ ನುಡಿಗಳನ್ನಾಡಿದರು.

ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ, ಕೊಡಗು ಬೆಳೆಗಾರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಾಚಂಗಡ ದಾದದೇವಯ್ಯ, ಕೋಶಾಧಿಕಾರಿ ಮಾಣೀರ ವಿಜಯ್ ನಂಜಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಾಳಿಮಾಡ ತಮ್ಮುಮುತ್ತಣ್ಣ ಹಾಗೂ ಚಟ್ಟಂಗಡ ನಾಣಯ್ಯ ಹಾಜರಿದ್ದರು. -ಎನ್.ಎನ್. ದಿನೇಶ್