ಕೂಡಿಗೆ, ನ. ೧೪: ಕುಶಾಲನಗರ ತಾಲೂಕು ವ್ಯಾಪ್ತಿಯ ಅರೆ ಮಲೆನಾಡು ಪ್ರದೇಶಗಳಾದ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಕೂಡಿಗೆ, ಕೂಡುಮಂಗಳೂರು, ಸೀಗೆಹೊಸೂರು, ಅಳುವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೦ಕ್ಕೂ ಹೆಚ್ಚಿನ ಉಪ ಗ್ರಾಮಗಳಲ್ಲಿನ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇವರುಗಳು ಸಾಕಿದ ಹಸುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರೇ ಇಲ್ಲ. ಕಳೆದ ೨೦ ವರ್ಷಗಳ ಹಿಂದೆ ಪ್ರಾರಂಭಗೊAಡಿರುವ ಪಶು ಆರೋಗ್ಯ ಕೇಂದ್ರಗಳಿಗೆ ಕಳೆದ ೫ ವರ್ಷಗಳಿಂದ ಪಶು ವೈದ್ಯರು ಇಲ್ಲದೆ ಚಿಕಿತ್ಸೆಗಾಗಿ ಪರದಾಡುವ ಪ್ರಸಂಗ ಎದುರಾಗುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚು ಹೈನುಗಾರಿಕೆಗೆ ಒತ್ತು ನೀಡುವ ಮತ್ತು ಅದರಲ್ಲಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಣೆ ಮಾಡಲು ತೊಡಗಿರುವ ಪ್ರದೇಶಗಳು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಇವೆ. ಈ ವ್ಯಾಪ್ತಿಯ ೮ ಗ್ರಾಮ ಪಂಚಾಯಿತಿಯ ೪೦ ಉಪ ಗ್ರಾಮಗಳಲ್ಲಿ ನೂರಾರು ರೈತರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೈಬ್ರೀಡ್ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ದಿನಂಪ್ರತಿ ೪೦ ಲೀಟರ್ಗೂ ಹೆಚ್ಚು ಹಾಲನ್ನು ಹಾಲು ಉತ್ಪಾದಕರ ಸಂಘಗಳಿಗೆ ಹಾಕುವುದರ ಮೂಲಕ ಈ ಭಾಗದ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಆರೋಗ್ಯ ಕೇಂದ್ರಗಳು ಇವೆ. ಆದರೆ ಪಶು ವೈದ್ಯರ ನೇಮಕವಾಗದ ಕಾರಣ ಹಸುಗಳ ಚಿಕಿತ್ಸೆಗೆ ಖಾಸಗಿ ವೈದ್ಯರನ್ನು ಅವಲಂಬಿಸುವ ಪ್ರಸಂಗ ಎದುರಾಗುತ್ತಿದೆ.
ಈ ಪಶು ಆರೋಗ್ಯ ಕೇಂದ್ರದಲ್ಲಿರುವ ಓರ್ವ ಪರಿವೀಕ್ಷಕರನ್ನು ಎರಡು ಕಡೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಹಾಕಲಾಗಿದೆ. ಸೋಮವಾರಪೇಟೆ ತಾಲೂಕು ಮಟ್ಟದ ಪಶು ವೈದ್ಯರು ವಾರಕ್ಕೆ ಒಂದು ದಿನ ಬಂದು ಹೋಗುತ್ತಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಹಾಲು ಉತ್ಪಾದಕರ ಸಹಕಾರ ಸಂಘಗಳು ತೊರೆನೂರು, ಹೆಬ್ಬಾಲೆ, ಶಿರಂಗಾಲ, ಅಳುವಾರ, ಸಿದ್ದಲಿಂಗಪುರ, ಕೂಡುಮಂಗಳೂರು, ಚಿಕ್ಕತ್ತೂರು ಭಾಗಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ರೈತರು ಹಾಲನ್ನು ಕರೆದು ಸಂಘಕ್ಕೆ ನೀಡುತ್ತಿದ್ದಾರೆ. ಅದರಂತೆ ಸರಕಾರದ ಪ್ರೋತ್ಸಾಹಧನ ಸಹ ದೊರೆಯುತ್ತಿದೆ. ಅದರ ಮೂಲಕ ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಬೆಲೆಯ ಹಸುಗಳಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿರುವ ಹೆಚ್ಚು ಪಶು ಆರೋಗ್ಯ ಕೇಂದ್ರಗಳ ಪಶು ವೈದ್ಯರು ನೇಮಕವಾಗದೆ. ಈ ಭಾಗದ ರೈತರ ಹಸುಗಳಿಗೆ ಚಿಕಿತ್ಸೆ ಭಾಗ್ಯ ಇಲ್ಲದಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಕಾಲು ಬಾಯಿ ಜ್ವರ ಜೊತೆಗೆ ಹೊಸ ರೋಗಗಳು ಕಾಣಿಸಿಕೊಂಡು ಅನೇಕ ಹಸುಗಳು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಸಂಬAಧಿಸಿದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರು ಪಶು ವೈದ್ಯರ ನೇಮಕ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ. - ಕೆ.ಕೆ. ನಾಗರಾಜಶೆಟ್ಟಿ.