ಮಡಿಕೇರಿ, ನ. ೧೪: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿರುವ ೨ನೇ ವರ್ಷದ ಕೊಡಗು ಮೀಡಿಯಾ ಪ್ರೀಮಿಯರ್ ಲೀಗ್ನ ಟ್ರೋಫಿ ಅನಾವರಣ ಕಾರ್ಯಕ್ರಮ ಹೊದ್ದೂರಿನ ಮುಕ್ಕೋಲೆ ಎಸ್ಟೇಟ್ ಸ್ಟೇನಲ್ಲಿ ನಡೆಯಿತು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಪತ್ರಕರ್ತರು ಸದಾ ಜಂಜಾಟದಲ್ಲಿರು ತ್ತಾರೆ. ಮನರಂಜನೆಯ ಕೊರತೆ ಅನುಭವಿಸುವ ಪತ್ರಕರ್ತರಿಗೆ ಈ ರೀತಿಯ ಕ್ರೀಡಾಕೂಟಗಳು ಮನೋಲ್ಲಾಸ ನೀಡುತ್ತದೆ. ಜೊತೆಗೆ ಒಗ್ಗಟ್ಟು ಮೂಡುತ್ತದೆ. ಪ್ರೆಸ್ಕ್ಲಬ್ನ ಪ್ರತಿ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ವಿಭಿನ್ನವಾಗಿರುತ್ತದೆ. ಈ ಬಾರಿಯೂ ತಂಡದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿರುವುದು ಎಂ.ಪಿ.ಎಲ್. ವಿಶೇಷವಾಗಿದೆ. ಐ.ಪಿ.ಎಲ್. ಮಾದರಿ ಕ್ರೀಡಾಕೂಟ ಆಯೋಜಿಸಿ ಜಿಲ್ಲೆಗೆ ಕ್ಲಬ್ ಮಾದರಿಯಾಗಿದೆ. ಪತ್ರಕರ್ತರು ಸಂಘಟನೆಯಲ್ಲಿ ಸಕ್ರಿಯರಾಗುತ್ತಿರು ವುದು ಸಂತೋಷದ ವಿಚಾರ ಎಂದು ಅವರು, ಪಂದ್ಯಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪಂದ್ಯಾವಳಿಯ ಪ್ರಮುಖ ಪ್ರಾಯೋಜಕತ್ವ ವಹಿಸಿರುವ ಯುಫೋರಿಯಾಝ್ ಸಂಸ್ಥೆಯ ಪ್ರಮುಖ ರೋಷನ್ ಚಾರ್ಲ್ಸ್ ಮಾತನಾಡಿ, ಪಂದ್ಯಾಟಕ್ಕೆ ಪ್ರಾಯೋಜಕತ್ವ ನೀಡಿರುವುದು ಸಂತಸ ತಂದಿದೆ. ಸಂಸ್ಥೆ ಮೂಲಕ ದೇಶದಲ್ಲಿ ೩ ವರ್ಷದಲ್ಲಿ ೨ ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಸಂಸ್ಥೆ ಹೊಂದಿದೆ. ಕೃಷಿ ಆದರಿತ ಉದ್ಯೋಗವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಕೃಷಿ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಸ್ಥೆಯಿAದ ಸಾವಯವ ಕೃಷಿಗೆ ಉತ್ತೇಜನ ನೀಡುವ ಪ್ರಯೋಗಶೀಲ ಯೋಜನೆ ರೂಪಿಸಲಾಗಿದೆ. ಜೊತೆಗೆ ಕ್ರೀಡೆಗೂ ಸಂಸ್ಥೆ ಮೂಲಕ ಉತ್ತೇಜಿಸುವ ಚಿಂತನೆಗಳಿವೆ ಎಂದು ಹೇಳಿದರು.
ನಾಡಪೆದ ಆಶಾ ತಂಡದ ಪ್ರಾಯೋಜಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ, ಮಾಧ್ಯಮದ ಮೂಲಕ ನಾಡಪೆದ ಆಶಾ ಚಿತ್ರ ಯಶಸ್ವಿಯಾಗಿದೆ. ಈ ರೀತಿಯ ಪಂದ್ಯಾಟದಿAದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ಪತ್ರಕರ್ತರು ಒಂದೂಗೂಡುವುದು ಕಷ್ಟಕರ. ಪಂದ್ಯಾಟ ಆಯೋಜನೆಯಿಂದ ಒಂದಾಗಲು ವೇದಿಕೆಯಾಗುತ್ತದೆ. ಒತ್ತಡ ಬದುಕಿನ ನಡುವೆ ಕಾರ್ಯಕ್ರಮ ಆಯೋಜಿಸಿ ಪ್ರೆಸ್ಕ್ಲಬ್ ರಾಜ್ಯಕ್ಕೆ ಮಾದರಿಯಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸ್ನೇಹ ಮರೆಯಾಗುತ್ತಿದೆ. ಈ ರೀತಿಯ ಕಾರ್ಯಕ್ರಮ ಸಹೋದರತ್ವ ಮೂಡಿಸಿ ಬಾಂಧವ್ಯ ವೃದ್ಧಿಸುತ್ತದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ಕೇವಲ ಕ್ರೀಡೆಯಾಗಿರದೆ ಪರಸ್ಪರ ಸ್ನೇಹ ಬೆಸೆಯಲು ಸಹಕಾರಿಯಾಗಿದೆ. ಸಂಘಟನೆಯ ದೃಷ್ಟಿಯಲ್ಲಿ ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸಿದೆ. ಪರಸ್ಪರ ಪರಿಚಯದ ಜೊತೆಗೆ ಬಾಂದವ್ಯ ವೃದ್ಧಿಯಾಗುತ್ತದೆ. ೨೦೨೦ರಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿತ್ತು. ಈ ಬಾರಿಯೂ ಮತ್ತಷ್ಟು ಸುಂದರವಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತದೆ. ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ವೃತ್ತಿ ಬಾಂಧವರು ಬಹುಮಾನ ಪ್ರಾಯೋಜಿಸಿರುವುದು ಈ ಬಾರಿಯ ವಿಶೇಷವಾಗಿದೆ. ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರು ಟ್ರೋಫಿ, ಹಿರಿಯ ವಕೀಲ ಚಂದ್ರಮೌಳಿ ನಗದು ಬಹುಮಾನ, ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ತೃತೀಯ ಸ್ಥಾನ ಗಳಿಸುವ ತಂಡಕ್ಕೆ ಬಹುಮಾನ ಪ್ರಾಯೋಜಿಸಿದ್ದಾರೆ ಎಂದರು.
ಕೊಡಗು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್ ಪಂದ್ಯಾಟ ಯಶಸ್ವಿಯಾಗಲಿ ಎಂದು ಹಾರೈಸಿದರು. ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ಉದ್ಯಮಿ ಚೈಯ್ಯಂಡ ಸತ್ಯ, ಮುಕ್ಕೋಲೆ ಎಸ್ಟೇಟ್ ಸ್ಟೇ ಮಾಲೀಕ ಚೌರೀರ ಸೋಮಣ್ಣ, ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಕೊಕ್ಕಲೇರ ಕೆ. ಅಯ್ಯಪ್ಪ ಹಾಜರಿದ್ದರು. ವಿಶ್ವ ಕುಂಬೂರು ಪ್ರಾರ್ಥನೆ, ನಿರ್ದೇಶಕ ಸುನಿಲ್ ಪೊನ್ನೆಟ್ಟಿ ಸ್ವಾಗತ, ಕಾರ್ಯಕ್ರಮ ಸಂಚಾಲಕ ಬೊಳ್ಳಜಿರ ಅಯ್ಯಪ್ಪ ನಿರೂಪಿಸಿ, ಉಪಾಧ್ಯಕ್ಷ ತೇಜಸ್ ಪಾಪಯ್ಯ ವಂದಿಸಿದರು.