ಶನಿವಾರಸಂತೆ, ನ. ೧೨: ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ರೋಟರಿ ಸಂಸ್ಥೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಅಂಗಡಿ- ಮುಂಗಟ್ಟು, ಹೊಟೇಲ್‌ಗಳು ಹಾಗೂ ಕೋಳಿ - ಮೀನು ಮಾರಾಟದ ಮಳಿಗೆಗಳ ಮುಂಭಾಗ ಐದಾರು ನಾಯಿಗಳು ಗುಂಪುಗೂಡಿ ಭಯ ಮೂಡಿಸುತ್ತವೆ. ಕಚ್ಚುವ ಭಯದಿಂದ ಮಕ್ಕಳು, ದ್ವಿಚಕ್ರ ವಾಹನ ಸವಾರರು ಧಾವಿಸಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದರೂ, ಗ್ರಾಮ ಪಂಚಾಯಿತಿಯವರು ಗಮನಹರಿಸುತ್ತಿಲ್ಲ. ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಂಚಾಯಿತಿಯವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರೋಟರಿ ಅಧ್ಯಕ್ಷ ಎಚ್.ಪಿ. ಮೋಹನ್, ಕಾರ್ಯದರ್ಶಿ ವಸಂತ್, ನಿರ್ದೇಶಕ ಎ.ಡಿ. ಮೋಹನ್ ಕುಮಾರ್, ಸದಸ್ಯರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.