ಸೋಮವಾರಪೇಟೆ, ನ.೧೨: ವಿದ್ಯುತ್ ಅವಘಡ ದಿಂದ ನಷ್ಟಕ್ಕೊಳಗಾದ ಗ್ರಾಹಕರೋರ್ವರಿಗೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ೬ ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಸಮೀಪದ ನಗರೂರು ಗ್ರಾಮದ ಕೃಷಿಕ ಎಸ್.ಎಲ್.ಶಂಕರ್ ಅವರು ವಿದ್ಯುತ್ ಇಲಾಖೆಯಿಂದ ತನಗಾದ ನಷ್ಟಕ್ಕೆ ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆದಿದ್ದಾರೆ.
೨೦೧೭ರ ಆಗಸ್ಟ್ ೫ರಂದು ಬೆಳಿಗ್ಗೆ ಮನೆಯ ಸಮೀಪ ಹಾದು ಹೋಗಿದ್ದ ೧೧ ಕೆ.ವಿ.ವಿದ್ಯುತ್ ತಂತಿ ತುಂಡಾಗಿ ಮನೆಯ ವಿದ್ಯುತ್ ಸಂಪರ್ಕದ ತಂತಿಯ ಮೇಲೆ ಬಿದ್ದ ಪರಿಣಾಮ ಮನೆಯೊಳಗಿದ್ದ ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಉಪಕರಣ ಸೇರಿದಂತೆ ಹಲವು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿತ್ತು.
ಅಗ್ನಿಶಾಮಕ ಸಿಬ್ಬಂದಿ ಗಳ ಸಕಾಲಿಕ ಕ್ರಮದಿಂದ ಆಗಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಈ ಬಗ್ಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಿದ್ದರಿಂದ ಶಂಕರ್ ಅವರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಕಾರ್ಯಪಾಲಕ ಅಭಿಯಂತರರು ಹಾಗೂ ಸೋಮವಾರಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ಧ ನಷ್ಟ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪರಸ್ಪರ ವಾದ, ಸಾಕ್ಷಿ, ಆಧಾರ ಪರಿಶೀಲಿಸಿದ ನ್ಯಾಯಾಲಯ ೨೦೧೮ರ ನವೆಂಬರ್ ೧೭ರಂದು ಶಂಕರ್ ರವರಿಗೆ ಸೆಸ್ಕ್ ೭.೫ ಲಕ್ಷ ರೂ. ನಷ್ಟ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ ೨೫ ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿತ್ತು.
ಈ ತೀರ್ಪಿನ ವಿರುದ್ಧ ಸೆಸ್ಕ್ ಇಲಾಖೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಎರಡು ಕಡೆಯವರ ವಾದ ಆಲಿಸಿದ ನ್ಯಾಯಾಧೀಶರಾದ ಕೆ.ಬಿ. ಸಂಗಣ್ಣನವರ್, ನಷ್ಟಕ್ಕೊಳಗಾದ ಶಂಕರ್‌ರವರಿಗೆ ಎರಡು ತಿಂಗಳೊಳಗೆ ಬಡ್ಡಿಯೊಂದಿಗೆ ಆರು ಲಕ್ಷ ರೂಪಾಯಿ ನಷ್ಟ ಭರಿಸುವಂತೆಯೂ ಹಾಗೂ ಇಪ್ಪತ್ತು ಸಾವಿರ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ದೂರುದಾರ ಶಂಕರ್, ಘಟನೆ ನಡೆದ ದಿನ ನಾವು ಸಂಬAಧಿಸಿದ ಇಲಾಖೆಯ ಅಧಿಕಾರಿ ಗಳಿಗೆ ವಿಚಾರ ತಿಳಿಸಿದರೂ ಸ್ಥಳಕ್ಕೆ ಬಾರದೆ, ಪರಿಶೀಲಿಸದೆ ಉಡಾಫೆ ತೋರಿಸಿದ್ದರು. ಆದ್ದರಿಂದ ನಾನು ನ್ಯಾಯಾಲಯದ ಮೆಟ್ಟಿಲೇರ ಬೇಕಾಯಿತು. ಇಂತಹ ಇಲಾಖೆ ಗಳಿಂದ ತೊಂದರೆಗೆ ಒಳಗಾದರೆ ನ್ಯಾಯ ಪಡೆಯಬಹುದೆಂಬುದು ಸಾಮಾನ್ಯ ಜನರಿಗೆ ಈ ಮೂಲಕ ತಿಳಿಯುವಂತಾಗಲಿ ಎಂದರು.