ಮಡಿಕೇರಿ, ನ. ೧೨: ಪ್ರತಿಕೂಲ ಹವಮಾನದಿಂದಾಗಿ ರೈತರ ಕಾಫಿ ಹಣ್ಣುಗಳು ಗಿಡದಲ್ಲಿಯೇ ಉದುರುತ್ತಿದ್ದು ರೈತ ಸಂಕಷ್ಟಕ್ಕೀಡಾಗಿದ್ದಾನೆ. ಹೀಗಾಗಿ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಿಲ್ಲಾಧಿಕಾರಿ ಸತೀಶ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಳೆದ ಬಾರಿ ಸುರಿದ ಮಳೆಯಿಂದಾಗಿ ರೈತರು ತಮ್ಮ ಕಾಫಿ ಬೆಳೆಯನ್ನು ಕಳೆದುಕೊಂಡಿದ್ದರು ಈ ವೇಳೆ ಕಾಫಿ ಬೋರ್ಡ್ ಅಧಿಕಾರಿಗಳ ತಂಡ ಕೆಲವು ಭಾಗಕ್ಕೆ ಸೀಮಿತಗೊಳಿಸಿ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಇಲ್ಲಿಯ ತನಕ ರೈತರಿಗೆ ಬೆಳೆ ನಷ್ಟದ ಬಗ್ಗೆ ಪರಿಹಾರ ಲಭಿಸಿಲ್ಲ. ಕೂಡಲೇ ಈ ಬಗ್ಗೆ ಪರಿಹಾರವನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಕಾಫಿ ಬೆಳೆಗಾರನಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಈ ನಿಟ್ಟಿನಲ್ಲಿ ಕೂಡಲೇ ಕಾಫಿ ಬೋರ್ಡ್ನ ಅಧಿಕಾರಿಗಳು ತಮ್ಮ ತಂಡದೊAದಿಗೆ ಆಗಮಿಸಿ ಕೊಡಗು ಜಿಲ್ಲೆಯ ವಿವಿಧ ಭಾಗಗಳ ರೈತರ ಕಾಫಿ ತೋಟಗಳಿಗೆ ಖುದ್ದು ಭೇಟಿ ನೀಡಿ, ನಷ್ಟದ ಬಗ್ಗೆ ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಳೆಯಿಂದಾಗಿ ಕಾಫಿ ಫಸಲನ್ನು ಕೊಯ್ದು ರೈತರು ಕಾಫಿಯನ್ನು ಕಣಕ್ಕೆ ತರುವ ಸಂದರ್ಭ ಫಸಲುಗಳು ಕೊಳೆತು ಹಾಳಾಗಿವೆ. ಕಾಫಿಯ ಮೌಲ್ಯ ಕಳೆದುಕೊಂಡು ಇದರ ಬೆಲೆಯು ಕೂಡ ಕುಗ್ಗಿ ರೈತನಿಗೆ ನಷ್ಟ ಸಂಭವಿಸುತ್ತಿದೆ. ಇದರಿಂದಾಗಿ ಫಾಲಿಹೌಸ್‌ಗೆ ಪ್ರಸ್ತುತ ಇರುವ ಶೇ.೫೦ರ ಸಬ್ಸಿಡಿ ದರವನ್ನು ಶೇ.೮೦ಕ್ಕೆ ಏರಿಸಬೇಕು. ಇದರಿಂದಾಗಿ ಕಾಫಿಯನ್ನು ಒಣಗಿಸಿಕೊಂಡು ರೈತ ತನ್ನ ಕಾಫಿಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುತ್ತಿದೆ. ಹೀಗಾಗಿ ಕೃಷಿ ಇಲಾಖೆಯು ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸುವಂತೆ ಆಗ್ರಹಿಸಿದರು.

ರೈತ ಭತ್ತ ಖರೀದಿ ಕೇಂದ್ರವನ್ನು ನವಂಬರ್ ಕೊನೆಯ ವಾರದ ಒಳಗೆ ಕಡ್ಡಾಯವಾಗಿ ತೆರೆಯಬೇಕು. ಕಾಡಾನೆಯಿಂದ ಭತ್ತದ ಗದ್ದೆಗಳು ಹಾಳಾಗಿದ್ದು ಇಂತಹ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು. ಅಲ್ಲದೆ ವಿವಿಧ ಹೋಬಳಿಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಅಟ್ಟುವ ಕೆಲಸ ತಕ್ಷಣ ಮಾಡಬೇಕು. ಸಿಸಿಎಫ್, ಅರಣ್ಯ ಮಂತ್ರಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕೂಡಲೇ ಸಭೆ ಆಯೋಜಿಸಬೇಕು. ರೈತರ ೧೦ ಹೆಚ್.ಪಿ. ಮೋಟರ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.

ವೀರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಪೊನ್ನಂಪೇಟೆ ನೂತನ ತಾಲೂಕಿಗೆ ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಭೇಟಿಯ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಪೊನ್ನಂಪೆಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ ಮಾಚಯ್ಯ, ಕರ್ತಮಾಡ ಸುಜು ಕರುಂಬಯ್ಯ, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಎಸ್.ಎಸ್. ಸುರೇಶ್ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.