ವೀರಾಜಪೇಟೆ, ನ. ೧೩: ಗೋವತ್ಸಾ ದ್ವಾದಶಿ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ಗೋ ಪೂಜೆ ಆಚರಿಸಲಾಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ದುರ್ಗಾವಾಹಿನಿ ಪೊನ್ನಂಪೇಟೆ ಪ್ರಖಂಡದ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿಯ ತಂಗುದಾಣದ ಬಳಿ ಗೋಪೂಜೆ ನಡೆಯಿತು. ಗೋವಿಗೆ ಆಹಾರ ಅರ್ಪಿಸಲಾಯಿತು. ಬಳಿಕ ಸ್ಥಳೀಯ ದೇವಾಲಯದ ಅರ್ಚಕರಿಂದ ವಿಶೇಷ ಪೂಜೆಯನ್ನು ನೆರೆವೇರಿಸಲಾಯಿತು. ಗೋಪೂಜೆಯ ಸಂದರ್ಭದಲ್ಲಿ ದುರ್ಗಾವಾಹಿನಿಯ ಜಿಲ್ಲಾ ಸಂಚಾಲಕ ಅಂಬಿಕಾ ಉತ್ತಪ್ಪ ಮಾತನಾಡಿ, ಗೋವಿನಲ್ಲಿ ಮುಕೋಟಿ ದೇವಾನು ದೇವತೆಗಳ ನೆಲೆಸಿವೆ. ಹಿಂದೂ ಧರ್ಮದಲ್ಲಿ ಸಕಲವನ್ನು ಕರುಣಿಸುವ ಕಾಮದೇನು ಎಂದು ಗೋವನ್ನು ಹೇಳಲಾಗುತ್ತದೆ. ಕೊಡಗಿನಲ್ಲಿ ಅಕ್ರಮವಾಗಿ ಗೋವನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಘಟನೆಗಳು ನಡೆಯುತ್ತಿದೆ. ಗೋವಿನ ಸಂರಕ್ಷಣೆಗಾಗಿ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಶಕ್ತಿ ಕೇಂದ್ರದ ಪ್ರಮುಖರಾದ ಮಾಣೀರ ಉಮೇಶ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕೃಷಿ ಮೋರ್ಚಾ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ್, ಗೋ ರಕ್ಷಕ್ ಪ್ರಮುಖ್ ಸಜನ್ ಗಣಪತಿ, ಮತ್ತು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.