ಕೊಡ್ಲಿಪೇಟೆ, ನ. ೧೩: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿ ಅಸಮರ್ಪಕವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ನಿರಂತರ ಕುಡಿಯುವ ನೀರು ಸೌಲಭ್ಯ ನೀಡುವ ಜಲ ಜೀವನ್ ಮಿಷನ್ ಯೋಜನೆಯಡಿ ಬ್ಯಾಡಗೊಟ್ಟ ಮತ್ತು ಬೆಂಬಳೂರು ಹಾಗೂ ಹಾರೋಹಳ್ಳಿ ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳದ ಕುರಿತು ಗ್ರಾಮ ಸಭೆಗಳಲ್ಲಿ ಪ್ರಸ್ತಾಪವಾಗಿತ್ತು.

ಈ ಹಿನ್ನೆಲೆ ಬ್ಯಾಡಗೊಟ್ಟ ಹಾಗೂ ಬೆಂಬಳೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಟ್ಯಾಂಕ್ ಹಾಗೂ ಮನೆಗಳಿಗೆ ಅಳವಡಿಸಿರುವ ಮೀಟರ್‌ಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.

ಸಮರ್ಪಕವಾಗಿ ಕಾಮಗಾರಿ ನಡೆಯದ ಕುರಿತು ಇಂಜಿನಿಯರ್ ಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಜೆ.ಜೆ.ಎಂ. ಯೋಜನೆಯ ಮುಖ್ಯ ಆಶಯದಂತೆ ಜಾರಿಯಾಗಬೇಕಾದರೆ ಕಾಮಗಾರಿಗಳು ಸಮರ್ಪಕವಾಗಿ ನಡೆಯಬೇಕು ಎಂದರು.

ನಲ್ಲಿಗಳಿಗೆ ಜಿ.ಎ. ಪೈಪ್ ಬದಲು ಪಿ.ವಿ.ಸಿ. ಪೈಪ್ ಹಾಕಿರುವುದು ಮತ್ತು ಪ್ಲೂ ವಾಲ್ ಜೋಡಿಸದೆ ಮೀಟರ್ ಅಳವಡಿಸಿರುವುದು, ಟ್ಯಾಂಕ್ ನಿರ್ಮಾಣ ಆಗುವುದಕ್ಕಿಂತ ಮುಂಚಿತವಾಗಿ ಅವೈಜ್ಞಾನಿಕವಾಗಿ ಮೀಟರ್ ಅಳವಡಿಸಿರುವ ಕುರಿತು ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧಿಕಾರಿಯ ಗಮನಕ್ಕೆ ತಂದರು.

ಈ ಸಂದರ್ಭ ಸ್ಥಳದಲ್ಲಿದ್ದ ಇಂಜಿನಿಯರ್ ಹಾಗೂ ಗುತ್ತಿಗೆ ದಾರರನ್ನು ತರಾಟೆಗೆ ತೆಗೆದುಕೊಂಡ ಸಿಇಓ ಅವರು, ಯೋಜನೆ ಸಮರ್ಪಕವಾಗಿ ಜಾರಿಯಾಗಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ, ಸದಸ್ಯರುಗಳಾದ ದಿನೇಶ್ ಕುಮಾರ್, ಮೋಕ್ಷಿಕ್ ರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಅನುಷ್ಠಾನ ಇಲಾಖೆಯ ಎ.ಇ.ಇ. ಶಿವಪ್ರಸಾದ್, ಅಭಿಯಂತರ ಸಲೀಂ ಸೇರಿದಂತೆ ಇತರರು ಹಾಜರಿದ್ದರು.

ನಂತರ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಲಾಯಿತು.