ಸೋಮವಾರಪೇಟೆ, ನ. ೧೧: ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಯೊಂದಿಗೆ ಶಿಸ್ತು ಕಲಿಸುತ್ತಿರುವ ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅಭಿಪ್ರಾಯಿಸಿದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಹಾಗೂ ಕುಶಾಲನಗರ ಸಂಸ್ಥೆಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-೧೯ರ ನಡುವೆಯೂ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸುರಕ್ಷತಾ ದೃಷ್ಟಿಯಿಂದ ಸ್ಕೌಟ್ ಮತ್ತು ಗೈಡ್ಸ್ನ ಶಿಕ್ಷಕರು, ಸಂಸ್ಥೆಯ ಪದಾಧಿಕಾರಿಗಳು ಹಾಗೂ ರೇಂಜರ್, ರೋರ‍್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿರುವುದರಿಂದ ಇಡೀ ಶಿಕ್ಷಣ ಇಲಾಖೆಗೆ ಗೌರವ ತಂದು ಕೊಟ್ಟಿದೆ. ಇದನ್ನ ವಿಶೇಷವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ಅಭಿನಂದನಾ ಪತ್ರವನ್ನು ನೀಡಿದೆ ಎಂದರು.
ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ಸಂಸ್ಥೆಯ ಕಾರ್ಯಚಟುವಟಿಕೆ, ಶಿಕ್ಷಕರ ತರಬೇತಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಆಯೋಜಿಸುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸ್ಕೌಟ್, ಗೈಡ್ಸ್ ಸಂಸ್ಥೆಯು ಶಿಸ್ತುಬದ್ಧ ಸಂಸ್ಥೆಯಾಗಿದ್ದು, ಪ್ರತಿ ವಿದ್ಯಾರ್ಥಿಯನ್ನು ಸಮಾಜದ ಆಸ್ತಿಯನ್ನಾಗಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಇಲ್ಲಿನ ಸಂಸ್ಥೆಯಲ್ಲಿ ಖಾಯಂ ಸದಸ್ಯರುಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದ ನಳಿನಿ ಗಣೇಶ್ ಹಾಗೂ ಉಷಾ ತೇಜಸ್ವಿಯವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎ. ಭಾಸ್ಕರ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕರಾದ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಸ್ಥಳೀಯ ಸಂಸ್ಥೆ ಖಜಾಂಚಿ ಕೆ.ಟಿ. ಚಂದ್ರಕಲಾ, ಕುಶಾಲನಗರ ಸಂಸ್ಥೆಯ ಅಧ್ಯಕ್ಷ ಎನ್.ಎಲ್. ಸುರೇಶ್‌ಕುಮಾರ್, ಕಾರ್ಯದರ್ಶಿ ದೇವಾನಂದ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್ ಲೆಕ್ಕಪತ್ರ ಮಂಡಿಸಿದರು. ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ಸಹಶಿಕ್ಷಕಿ ಸ್ವಾತಿ ಹಿಂದಿನ ಮಹಾಸಭೆಯ ವರದಿ, ಜೂಮ್ ಆಪ್ ಕಾರ್ಯಕ್ರಮದ ವರದಿಯನ್ನು ಕುಂಬೂರು ಶಾಲಾ ಶಿಕ್ಷಕಿ ಸರಳಕುಮಾರಿ, ೨೦೨೧-೨೨ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಗೌಡಳ್ಳಿ ಶಾಲಾ ಶಿಕ್ಷಕಿ ಡಿ.ಎಸ್. ಆಶಾ ಹಾಗೂ ಗುಡ್ಡೆಹೊಸೂರು ಶಿಕ್ಷಕಿ ಯಶುಮತಿ ಮಂಡಿಸಿದರು.