ಸೋಮವಾರಪೇಟೆ, ನ. ೧೧: ಕಾಲೇಜು ಮುಗಿಸಿ ಮನೆಗೆ ತೆರಳದೇ ಬಸ್ ನಿಲ್ದಾಣದಲ್ಲಿ ಮಾರಾಮಾರಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದು ತಮ್ಮದೇ ಧಾಟಿಯಲ್ಲಿ ‘ಬುದ್ಧಿವಾದ’ ಹೇಳಿ ಕಳುಹಿಸಿದ ಘಟನೆ ಇಂದು ಸಂಜೆ ನಡೆಯಿತು.
ತರಗತಿ ಮುಗಿಸಿ ಪಟ್ಟಣಕ್ಕೆ ಆಗಮಿಸಿದ ಕೆಲ ವಿದ್ಯಾರ್ಥಿಗಳು, ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ ಹೊಡೆದಾಟಕ್ಕೆ ಮುಂದಾಗಿದ್ದಾರೆ. ಸುಮಾರು ೧೦ಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಮಾರಾಮಾರಿಯಲ್ಲಿ ತೊಡಗಿದ್ದ ಸಂದರ್ಭ ನಿಲ್ದಾಣ ನಿರ್ವಾಹಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಯುವಕರ ಗುಂಪು ಹೊಡೆದಾಡುತ್ತಲೇ ಮಾರ್ಕೆಟ್‌ಗೆ ತೆರಳಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ಕಂಡ ವಿದ್ಯಾರ್ಥಿಗಳ ಗುಂಪು ಓಟಕ್ಕಿತ್ತಿದೆ. ಯುವ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಈರ್ವರನ್ನು ಹಿಡಿದು ಠಾಣೆಗೆ ಕರೆದೊಯ್ದು ತಮ್ಮದೇ ರೀತಿಯಲ್ಲಿ ಬುದ್ದಿವಾದ ಹೇಳಿದ್ದಾರೆ.
ಇದೀಗ ಕಾಲೇಜುಗಳು ಆರಂಭಗೊAಡಿದ್ದು, ಬಸ್‌ಗಾಗಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಯುತ್ತಿರುತ್ತಾರೆ. ಈ ಸಂದರ್ಭ ಕೆಲ ವಿದ್ಯಾರ್ಥಿಗಳು, ಪುಂಡರು ಸುಖಾಸುಮ್ಮನೆ ಅಲೆದಾಡುತ್ತಿದ್ದು, ಆಗಾಗ್ಗೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿರುತ್ತವೆ. ಸಂಜೆ ವೇಳೆಯಲ್ಲಿ ಪಟ್ಟಣದಲ್ಲಿ ಪೊಲೀಸರು ಓಡಾಟ ನಡೆಸುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.