ಕುಶಾಲನಗರ, ನ. ೧೧: ಮುಸ್ಲಿಂ ಸಮುದಾಯದಲ್ಲಿ ಪ್ರಜ್ಞಾವಂತಿಕೆ ಬೆಳೆದಿದೆ ಎಂಬುದಕ್ಕೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯೆ ಸಾಕ್ಷಿ ಯಾಗಿದೆ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ರಫೀಕ್ ಅಹಮ್ಮದ್ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎರಡು ಕ್ಷೇತ್ರಗಳಿಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಬಿಜೆಪಿಗೆ ಲಾಭ ಆಗುತ್ತದೆ ಎಂಬ ಆಲೋಚನೆ ಹೊಂದಿತ್ತು. ಆದರೆ ಮುಸ್ಲಿಂ ಸಮುದಾಯ ಪ್ರಜ್ಞಾವಂತಿಕೆ ಹಾಗೂ ರಾಜಕೀಯ ಪ್ರಬುದ್ಧತೆ ಯನ್ನು ಪ್ರದರ್ಶಿಸುವ ಮೂಲಕ ಮೂವತ್ತು ಸಾವಿರ ಮತಗಳಿಸುತ್ತಿದ್ದ ಜೆಡಿಎಸ್‌ಗೆ ಠೇವಣಿ ಕೂಡ ಸಿಗದಂತೆ ಮಾಡಿದ್ದಾರೆ. ಜೆಡಿಎಸ್ ಮಾಜಿ ಪ್ರಧಾನಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ತಾ. ೧೬ ರಂದು ಪದಗ್ರಹಣ: ಬೆಂಗಳೂರಿನಲ್ಲಿ ತಾ. ೧೬ ರಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರು. ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಸ್ಮಾನ್, ಪ್ರಮುಖರಾದ ಪಿ.ಸಿ. ಹಸೈನಾರ್, ರಜಾಕ್, ಅಶ್ರಫ್, ಇಬ್ರಾಹಿಂ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್‌ಕುಮಾರ್, ಜಿಲ್ಲಾ ವಕ್ತಾರ ಸುರೇಶ್, ಪೀಟರ್ ಮತ್ತಿತರರು ಇದ್ದರು.