ಸೋಮವಾರಪೇಟೆ, ನ. ೧೧: ಪಟ್ಟಣದ ಬಸವೇಶ್ವರ ರಸ್ತೆಯ ಮನೆಯೊಂದರಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿ ಕೇಂದ್ರವು ಮಕ್ಕಳ ಪಾಲಿಗೆ ಭಾರೀ ಗಂಡಾAತರ ತಂದೊಡ್ಡುವ ಸ್ಥಿತಿಯಲ್ಲಿದೆ.

ಸುಮಾರು ೧೫ ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿದ್ದಾರೆ. ಕಟ್ಟಡವು ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡದ ಒಂದು ಭಾಗದ ಗೋಡೆ ಕುಸಿಯುವ ಹಂತದಲ್ಲಿದೆ. ಮಣ್ಣಿನ ಗೋಡೆಯಿಂದ ನಿರ್ಮಾಣಗೊಂಡಿರುವ ಮನೆಯನ್ನು ಬಾಡಿಗೆ ಪಡೆದು ಅಂಗನವಾಡಿ ತೆರೆಯಲಾಗಿದ್ದು, ಸುಮಾರು ೪೫ ಮಕ್ಕಳು ಈ ಅಂಗನವಾಡಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ಇದರಲ್ಲಿ ೧೫ ಮಕ್ಕಳು ಪ್ರತಿನಿತ್ಯ ಅಂಗನವಾಡಿಗೆ ಬರುತ್ತಿದ್ದು, ಉಳಿದ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಅವರುಗಳ ಮನೆಗೆ ತಲುಪಿಸಲಾಗುತ್ತಿದೆ. ಕೇಂದ್ರದಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಕೆಲಸ ನಿರ್ವಹಿಸುತ್ತಿದ್ದು, ಭಯದಿಂದಲೇ ದಿನ ಕಳೆಯುವಂತಾಗಿದೆ.

ಬಸವೇಶ್ವರ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿಗೆ ಒಳಪಟ್ಟ ಜಾಗವಿದ್ದು, ಇದರಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪಂಚಾಯಿತಿಯ ಜಾಗವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ಒಳಪಡಿಸಿ ದಾಖಲೆ ಪತ್ರ ನೀಡಿದರೆ, ತಕ್ಷಣ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಇಲಾಖಾಧಿಕಾರಿಗಳು ಭರವಸೆ ನೀಡಿದ್ದಾರೆ.

ಸ್ಥಳೀಯ ವಾರ್ಡ್ ಸದಸ್ಯ ಬಿ.ಆರ್. ಮೃತ್ಯುಂಜಯ ಅವರ ಕೋರಿಕೆ ಮೇರೆ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿದ ಇಲಾಖಾಧಿಕಾರಿ ಅಣ್ಣಯ್ಯ ಅವರು, ತಕ್ಷಣ ಬೇರೊಂದು ಕಟ್ಟಡಕ್ಕೆ ಕೇಂದ್ರವನ್ನು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದಾರೆ.

ಇಲಾಖೆಯಿಂದ ೩ ಸಾವಿರ ಬಾಡಿಗೆ ಹಣ ಪಾವತಿಸಲಾಗುವುದು. ಬಾಡಿಗೆ ಹೆಚ್ಚಾದರೆ ಉಳಿದ ಹಣವನ್ನು ಪಟ್ಟಣ ಪಂಚಾಯಿತಿಯಿAದ ಭರಿಸಲು ಕ್ರಮ ಕೈಗೊಳ್ಳಬೇಕೆಂದು ಅಣ್ಣಯ್ಯ ಅವರು ಸಲಹೆ ನೀಡಿದ್ದು, ಇದರೊಂದಿಗೆ ಜಾಗವನ್ನು ಇಲಾಖೆಗೆ ವಹಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಅತೀ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದ್ದು, ತಕ್ಷಣ ಇದನ್ನು ಸ್ಥಳಾಂತರಿಸಲು ಇಲಾಖೆಯೊಂದಿಗೆ ಪಟ್ಟಣ ಪಂಚಾಯಿತಿಯೂ ಗಮನ ಹರಿಸಬೇಕಿದೆ.