ಗೋಣಿಕೊಪ್ಪಲು, ನ. ೧೧: ತಿತಿಮತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಅಧಿಕಾರಿಗಳ ಹಾಗೂ ಆದಿವಾಸಿ, ದಲಿತ ಮುಖಂಡರ ಸಭೆ ರದ್ದಾದ ಹಿನ್ನೆಲೆ ಅಸಮಾಧಾನಗೊಂಡ ಮುಖಂಡರುಗಳು ಪಂಚಾಯಿತಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು.
ತಾಲೂಕು ಮಟ್ಟದ ಅಧಿಕಾರಿಗಳಾದ ತಾ.ಪಂ.ಯ ಕಾರ್ಯನಿರ್ವಾಹಣಾಧಿಕಾರಿಗಳು, ತಾಲೂಕು ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ತಿತಿಮತಿ ಸುತ್ತಮುತ್ತಲಿನ ಜನತೆಯ ಕುಂದು ಕೊರತೆಗಳ ವಿಚಾರವಾಗಿ ದಲಿತ ಹಾಗೂ ಆದಿವಾಸಿಗಳ ಮುಖಂಡರ ಸಭೆಯು ಆಯೋಜಿಸಲಾಗಿತ್ತು.
ಸಭೆಗೆ ದಲಿತ ಹಾಗೂ ಆದಿವಾಸಿ ಮುಖಂಡರು ಆಗಮಿಸುವಂತೆ ತಿತಿಮತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದ್ದರು. ಅಧಿಕಾರಿಗಳ ಸೂಚನೆಯಂತೆ ಮುಖಂಡರುಗಳು ಸಭೆಗೆ ಆಗಮಿಸಿದ್ದರು. ಈ ವೇಳೆ ಸಭೆ ರದ್ದಾಗಿದೆ ಎಂದು ಅಧಿಕಾರಿಗಳು ಮುಖಂಡರುಗಳಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಮುಖಂಡರುಗಳು ಪಂಚಾಯಿತಿಯ ಮುಂಭಾಗದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಸಭೆ ರದ್ದಾದ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾಜಿ ಗ್ರಾ.ಪಂ. ಸದಸ್ಯರಾದ ಶಿವುಕುಮಾರ್, ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮಣಿಕುಂಞ, ಬುಡಕಟ್ಟು ಕೃಷಿಕರ ಸಂಘದ ಪ್ರಭಾರ ಅಧ್ಯಕ್ಷ ಪಿ.ಸಿ. ರಾಮು, ಪದಾಧಿಕಾರಿಗಳಾದ ಸಿದ್ದಪ್ಪ, ಶಾಂತಮ್ಮ, ತಮ್ಮಯ್ಯ, ಪಾಪಣ್ಣ, ರವೀನಾ, ರಾಜು, ರಮೇಶ, ಮಾರ, ರಾಮು, ಮಾದ ದ.ಸಂ.ಸ. ಪ್ರಮುಖ ಗೋವಿಂದಪ್ಪ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.