ಸಿದ್ದಾಪುರ, ನ. ೧೧: ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಖಾಯಂ ಪಿಡಿಒ ಹಾಗೂ ಇನ್ನಿತರ ಅಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಮುಖಂಡ ಪಿ.ಆರ್. ಭರತ್ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾ.ಪಂ.ಯು ಗ್ರೇಡ್ ೧ ಪಂಚಾಯಿತಿ ಆಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜನರು ಹೆಚ್ಚಾಗಿದ್ದಾರೆ. ಇವರುಗಳು ಪಂಚಾಯಿತಿ ಕಚೇರಿಗೆ ತಮ್ಮ ಕೆಲಸ ಕಾರ್ಯದ ನಿಮಿತ್ತ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಪಿಡಿಒ ಹಾಗೂ ಇತರ ಅಧಿಕಾರಿಗಳು ಇಲ್ಲದೇ ಹಿಂತಿರುಗಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ; ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಖಾಯಂ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕಾಧಿಕಾರಿ ಯನ್ನು ನೇಮಕ ಮಾಡಬೇಕೆಂದು ಭರತ್ ಒತ್ತಾಯಿಸಿದರು. ಈ ಸಂದರ್ಭ ಪಕ್ಷದ ಪದಾಧಿಕಾರಿಗಳಾದ ಚಂದ್ರನ್, ಜೋಸ್, ರಾಮಚಂದ್ರ ಇನ್ನಿತರರು ಹಾಜರಿದ್ದರು.