ಚೆಟ್ಟಳ್ಳಿ, ನ. ೧೨: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ರಚನೆಯಾಗಿದ್ದು, ತಾ. ೧೫ ರಂದು ಉದ್ಘಾಟನೆಗೊಳ್ಳಲಿದೆ. ವೀರರನಾಡು ಸೈನಿಕರ ಬೀಡು ಎಂದು ಪ್ರಸಿದ್ಧಿಗೊಂಡ ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರ ಸೇವೆ, ಕುಂದು ಕೊರತೆಗಳಿಗೆ ಸ್ಪಂದಿಸುವುದು, ಆಕಸ್ಮಿಕ ಅವಘಡದಿಂದ ಮರಣ ಹೊಂದಿದವರ ಕುಟುಂಬಕ್ಕೆ ನೆರವಾಗುವುದು, ಮಾಜಿ ಸೈನಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವುದು, ವಿದ್ಯಾಸಂಸ್ಥೆಗಳಲ್ಲಿ ಯುವ ಪೀಳಿಗೆಗೆ ರಾಷ್ಟçಭಕ್ತಿ ಹಾಗೂ ಸೇನೆಗೆ ಸೇರಲು ಪ್ರೇರಣೆ ನೀಡುವುದು, ವಾರ್ಷಿಕ ರಕ್ತದಾನ ಶಿಬಿರ ಆಯೋಜಿಸುವುದು, ನೊಂದ ಹಾಗೂ ಅವಶ್ಯಕತೆಯಿರುವ ಮಾಜಿ ಸೈನಿಕರಿಗೆ ನೆರವಾಗುವುದು, ಜೊತೆಗೆ ಮಾಜಿ ಸೈನಿಕರಿಗೆ ಸೈನಿಕರ ಭವನ ನಿರ್ಮಿಸುವ ಗುರಿಯೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕ ರಚನೆಯಾಗಿದೆ. ಸಂಘದ ನೋಂದಣಿ ನಡೆದು ಸದಸ್ಯತ್ವ ಅಭಿಯಾನ ಪ್ರಾರಂಭಿಸಿ ಈಗಾಗಲೇ ಸುಮಾರು ೩೦೦ಕ್ಕೂ ಅಧಿಕ ಮಾಜಿ ಸೈನಿಕರ ಸದಸ್ಯತ್ವ ನೋಂದಣಿಯಾಗಿದೆ.

ತಾ. ೧೫ ರಂದು ಉದ್ಘಾಟನೆ

ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಕೊಡಗು ಘಟಕದ ಉದ್ಘಾಟನೆ ತಾ. ೧೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ. ಸೋಮಣ್ಣ, ಉಪಾಧ್ಯಕ್ಷ ಎಸ್. ಸುಧೀರ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಅಂಕಣಕಾರ ಸಂತೋಷ್ ತಮ್ಮಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಶಿವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರುಗಳು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಡಿಕೇರಿ ಸಂಚಾಲಕ ಕರವಂಡ ಪಿ. ಚಿಣ್ಣಪ್ಪ, ಉಪಸಂಚಾಲಕ ಪೋರೆಯಂಡ ತಮ್ಮಯ್ಯ, ಕುಶಾಲನಗರ ಸಂಚಾಲಕ ಪೇರಿಯನ ವಾಸು ಉಪಸ್ಥಿತರಿದ್ದರು.