ಶನಿವಾರಸಂತೆ, ನ. ೧೨: ಕಾರಿನಲ್ಲಿ ತೆರಳುವ ಸಂದರ್ಭ ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಶನಿವಾರಸಂತೆ ಬಳಿ ನಡೆದಿದೆ. ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಮತ್ತು ಕುಟುಂಬ ತಾ. ೭ರಂದು ತಮ್ಮ ಕಾರು (ಕೆಎ೧೨ ಎನ್೩೬೦೨)ರಲ್ಲಿ ಮೈಸೂರಿಗೆ ಕಾರ್ಯಕ್ರಮದ ಸಲುವಾಗಿ ತೆರಳುವ ಸಂದರ್ಭ ಶನಿವಾರಸಂತೆ ಜಾತ್ರಾ ಮೈದಾನದ ಬಳಿ ೬ ಜನರ ತಂಡ ೩ ಬೈಕ್‌ನಲ್ಲಿ ಬಂದು ಕಾರನ್ನು ಅಡ್ಡಗಟ್ಟಿ ಜಾಕಿರ್ ಪಾಷನನ್ನು ಕಾರಿನಿಂದ ಹೊರಗೆಳೆದು ಥಳಿಸಿ ತಡೆಯಲು ಬಂದ ಪತ್ನಿ ನಾಜಿಯ ತಬಸ್ಸುಮ್ ಅವರ ಮೇಲೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ೩೨ ಗ್ರಾಂ ಚಿನ್ನದ ಸರ ಕಸಿದು ಕಾರಿನಲ್ಲಿದ್ದ

ರೂ. ೧೨ ಸಾವಿರ ನಗದನ್ನು ಕದ್ದೊಯ್ದು ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಬಂದ ಒಂದು ವಾಹನದ ಸಂಖ್ಯೆ ಪೊಲೀಸರಿಗೆ ನೀಡಿ ಶುಕ್ರವಾರ ಸಂಜೆ ಠಾಣೆಯ ಮುಂಭಾಗ ಸ್ಥಳೀಯರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.