ಕೂಡಿಗೆ, ನ. ೧೦ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಮಳೆಯನ್ನು ಅವಲಂಬಿಸಿ ಹೆಚ್ಚು ರೈತರು ಅಳುವಾರ, ಸಿದ್ದಲಿಂಗಪುರ, ಸೀಗೆಹೊಸೂರು, ಮದಲಾಪುರ, ತೊರೆನೂರು, ಶಿರಂಗಾಲ ವ್ಯಾಪ್ತಿಯಲ್ಲಿ ಸಿಹಿ ಗೆಣಸು ಬೆಳೆಯನ್ನು ಬೆಳೆಯಲಾಗಿತ್ತು. ಕಳೆದ ಕೊರೊನಾ ಸಂದರ್ಭದಲ್ಲಿ ಸಿಹಿ ಗೆಣಸಿನ ಬೆಲೆ ತೀರ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಭಾಗದ ರೈತರು ತೀರ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಕಳೆದ ಒಂದು ವಾರದಿಂದ ಗೆಣಸಿನ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಇದರಿಂದಾಗಿ ರೈತರು ಗೆಣಸು ಕೀಳಲು ಆರಂಭ ಮಾಡಿದ್ದಾರೆ.

ಕಳೆದ ತಿಂಗಳಲ್ಲಿ ಸಿಹಿ ಗೆಣಸು ಕೆ.ಜಿ.ಗೆ ಕೇವಲ ರೂ. ೩ ಮಾತ್ರ ಇತ್ತು. ಇದೀಗ ರೂ. ೭ ಆಗಿರುವುದರಿಂದ ಮತ್ತು ಸಿಹಿ ಗೆಣಸು ಹೊರ ರಾಜ್ಯಕ್ಕೆ ಸರಬರಾಜು ಆಗುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ರೈತರು ಸಿಹಿ ಗೆಣಸು ಬೆಳೆಯನ್ನು ಕೀಳಲು ಪ್ರಾರಂಭ ಮಾಡಿದ್ದಾರೆ. ಈ ಬಾರಿ ಮಳೆಯು ಹದವಾಗಿ ಬಿದ್ದಿದರಿಂದಾಗಿ ಗೆಣಸಿನ ಬೆಳೆಯು ಉತ್ತಮವಾಗಿ ಬಂದಿದೆ.

ಕಳೆದ ವರ್ಷದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಶುಂಠಿ ಸೇರಿದಂತೆ ಉಪ ಬೆಳೆಗಳ ಬೆಲೆ ತೀರಾ ಕಡಿಮೆಯಾಗಿ ರೈತರು ಭಾರೀ ನಷ್ಟ ಅನುಭವಿಸಿದ್ದರು. ಕೊಂಡು ಕೊಳ್ಳುವವರು ಇಲ್ಲದೆ ರೈತ ಬೆಳೆದ ಬೆಳೆಯನ್ನು ತಾನೇ ಉಳುಮೆ ಮಾಡಿದ ಪ್ರಸಂಗಗಳು ನಡೆದಿದ್ದವು.