ಮಡಿಕೇರಿ, ನ. ೯: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ವಸ್ತುಗಳು ಹಾಗೂ ನಗದು ಕಳ್ಳತನವಾಗಿ ೫ ವರುಷಗಳು ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ. ಪರಿಶ್ರಮದಿಂದ ಸಂಪಾದಿಸಿದ ಆಭರಣ ಹಾಗೂ ವಸ್ತುಗಳನ್ನು ಕಳೆದುಕೊಂಡವರು ಪೊಲೀಸ್ ಇಲಾಖೆ ಮೇಲೆ ಇನ್ನೂ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ೨೦೧೫ರಲ್ಲಿ ಪುತ್ತಾಮನೆ ರಾಧಿಕಾ ಎಂಬವರ ಮನೆಯಲ್ಲಿ, ೨೦೧೬ರಲ್ಲಿ ಕೋಟೇರ ಕಾವ್ಯಶ್ರೀ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಇದಾದ ಬಳಿಕ ಇವರಿಬ್ಬರ ಮನೆಯಲ್ಲಿ ೨೦೧೮ರಲ್ಲಿ ಮತ್ತೊಮ್ಮೆ ಕಳ್ಳತನ ನಡೆದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಹಲವು ಬಾರಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ತನಿಖೆ ಚುರುಕು ಗೊಳಿಸಲು ಮನವಿ ಮಾಡಲಾಗಿದ್ದರು, ಆರೋಪಿಗಳ ಪತ್ತೆಯಾಗದ ಬಗ್ಗೆ ಈರ್ವರು ಗೃಹಿಣಿಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತಾಮನೆ ರಾಧಿಕ ದತ್ತು, ೧೨.೧೦.೨೦೧೫ರಲ್ಲಿ ಮುಂಜಾನೆ ಪತಿಯ ವೈದ್ಯಕೀಯ ಪರೀಕ್ಷೆಗೆಂದು ಮೈಸೂರಿಗೆ ತೆರಳಿದ್ದೆವು. ಮರುದಿನ ಮನೆಗೆ ಬಂದು ನೋಡಿದಾಗ ಮುಂಬಾಗಿಲಿನ ಬೀಗವನ್ನು ಹೊಡೆದು ಹಾಕಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಕಪಾಟು, ಗಾಡ್ರೆಜ್, ಒಡವೆಗಳಿದ್ದ ಪೆಟ್ಟಿಗೆಗಳನ್ನು ಹೊಡೆದು ಹಾಕಲಾಗಿತ್ತು. ಸುಮಾರು ೭೦ ಸಾವಿರ ನಗದು, ವಿದೇಶಿ ಕರೆನ್ಸಿ, ೮೦೦ ಗ್ರಾಂ ಚಿನ್ನಾಭರಣ, ೨ ಪೀಚೆಕತ್ತಿ. ವಾಚ್‌ಗಳು ಸೇರಿದಂತೆ ಸುಮಾರು ೨೦ ಲಕ್ಷ ಮೌಲ್ಯದ ವಸ್ತುಗಳು ಕಳವಾಗಿತ್ತು. ಪೊನ್ನಂಪೇಟೆ ಪೊಲೀಸ್ ಠಾಣೆ ಎದುರೇ ತನ್ನ ಮನೆ ಇದ್ದು, ಸಿನಿಮೀಯ ರೀತಿಯಲ್ಲಿ ಕೃತ್ಯ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದೆ. ಪ್ರಕರಣವೂ ದಾಖಲಾಗಿತ್ತು. ಇದಾದ ಬಳಿಕ ೧೫.೨.೨೦೧೮ರಲ್ಲಿ ಮತ್ತೊಮ್ಮೆ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಸಂದರ್ಭ ಕಾಲುಚೈನ್, ಸರಗಳು, ವಾಚ್ ಸೇರಿದಂತೆ ಒಟ್ಟು ರೂ. ೫೦ ಸಾವಿರ ಮೌಲ್ಯದ ವಸ್ತುಗಳು ದೋಚಲ್ಪಟ್ಟಿತ್ತು ಎಂದು ತಿಳಿಸಿದರು.

ಪೊನ್ನಂಪೇಟೆ ನಿವಾಸಿ ಕೋಟೇರ ಕಾವ್ಯಶ್ರೀ ಮಾತನಾಡಿ, ೨೦೧೬ರಲ್ಲಿ ಮೊದಲ ಬಾರಿಗೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಂದಾಜು ೩೦೦ ಗ್ರಾಂ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಕಾಣೆಯಾಗಿದ್ದವು. ೨೦೧೮ರಲ್ಲಿಯೂ ಮತ್ತೊಮ್ಮೆ ಕಳ್ಳತನವಾಗಿದೆ. ಒಟ್ಟು ರೂ. ೪೫ ಲಕ್ಷದ ವಸ್ತುಗಳು ಕಳವಾಗಿವೆ. ಈ ಕೃತ್ಯಗಳ ಹಿಂದೆ ಯಾವುದೋ ಗುಂಪಿನ ಕೈವಾಡ ಇದೆ ಎಂಬ ಅನುಮಾನ ವ್ಯಕ್ತಪಡಿಸಿದ ಇವರು, ಸೂಕ್ತ ತನಿಖೆಯಾಗಿ ಕಳ್ಳತನ ಮಾಲನ್ನು ವಶಪಡಿಸಿಕೊಂಡು ನೀಡಬೇಕೆಂದು ಮನವಿ ಮಾಡಿದರು.

ಅಲ್ಲದೆ, ಹಲವು ಬಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಉಪನಿರೀಕ್ಷಕರು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರದ ಮೂಲಕ ವಿಚಾರವನ್ನು ತಿಳಿಸಲಾಗಿದೆ.

(ಮೊದಲ ಪುಟದಿಂದ) ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಕೂಡ ಬಂದಿದೆ. ಪೊಲೀಸರು ನಿರ್ಲಕ್ಷö್ಯ ವಹಿಸದೆ ಕಾರ್ಯಾಚರಣೆ ಮಾಡಬೇಕು ಎಂದರು.

ಪತ್ತೆಗೆ ಮನವಿ

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ಕಳ್ಳತನವಾದ ಮಾಲುಗಳನ್ನು ವಶಪಡಿಸಿಕೊಂಡು ಕಳೆದುಕೊಂಡವರಿಗೆ ಹಸ್ತಾಂತರಿಸಿದೆ. ಆದರೆ, ನಮ್ಮ ಪ್ರಕರಣವನ್ನು ಇಂದಿಗೂ ಬೇಧಿಸಿಲ್ಲ. ಈ ಬಗ್ಗೆ ತಮಗೆ ಅತೃಪ್ತಿ ಇದೆ ಎಂದು ಈರ್ವರು ಬೇಸರ ವ್ಯಕ್ತಪಡಿಸಿದರು.

ಸಣ್ಣ-ಪುಟ್ಟ ಪ್ರಕರಣವನ್ನು ಪತ್ತೆಹಚ್ಚುವ ಪೊಲೀಸ್ ಇಲಾಖೆ ದೊಡ್ಡ ಪ್ರಮಾಣದ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ತಡಮಾಡಲು ಕಾರಣ ಏನು ಎಂದು ಪ್ರಶ್ನಿಸಿದ ರಾಧಿಕಾ ಹಾಗೂ ಕಾವ್ಯಶ್ರೀ, ನಮಗೆ ಪೊಲೀಸ್ ಇಲಾಖೆ ಮೇಲೆ ಇಂದಿಗೂ ನಂಬಿಕೆ ಇದೆ. ಅದಲ್ಲದೆ ೨ ಮನೆಗಳಲ್ಲಿ ನಡೆದ ಘಟನೆಗೆ ಹೋಲಿಕೆ ಇದೆ. ಆಗಾಗಿ ಒಂದೇ ಗುಂಪು ದುಷ್ಕೃತ್ಯವೆಸಗಿರುವ ಅನುಮಾನ ಇದೆ. ತನಿಖೆ ಬಿರುಸು ಮಾಡಿದ್ದಲ್ಲಿ ಕಳ್ಳರನ್ನು ಪತ್ತೆಹಚ್ಚಬಹುದು ಎಂದರು.