ಸೋಮವಾರಪೇಟೆ, ನ. ೯: ಪಟ್ಟಣದ ಪುಟ್ಟಪ್ಪ ವೃತ್ತದ ಹೈಮಾಸ್ಟ್ ವಿದ್ಯುತ್ ಕಂಬದ ಪಕ್ಕದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಯುವಕ ಮಂಜುನಾಥ್ ಕುಟುಂಬಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ೫ಲಕ್ಷ ರೂ. ಪರಿಹಾರ ನೀಡಬೇಕೆಂದು ನಗರ ಕಾಂಗ್ರೆಸ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎ ನಾಗರಾಜು, ಹೈಮಾಸ್ಟ್ ಕಂಬದ ಬುಡದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಬಗ್ಗೆ ಕಳೆದ ೩ ವರ್ಷಗಳ ಹಿಂದೆಯೇ ಪಂಚಾಯಿತಿಗೆ ದೂರು ನೀಡಲಾಗಿತ್ತು. ಪಂಚಾಯಿತಿ ನಿರ್ಲಕ್ಷö್ಯದಿಂದ ಜೀವಹಾನಿ ಸಂಭವಿಸಿದೆ. ಪಂಚಾಯಿತಿ ಹೊಣೆ ಹೊತ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ನಗರ ಕಾಂಗ್ರೆಸ್ ವತಿಯಿಂದ ಪಟ್ಟಣದ ೫ ವಾರ್ಡ್ಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಪೂರ್ಣಗೊಳಿಸಲಾಗಿದೆ. ವಾರ್ಡ್ಗಳಲ್ಲಿನ ಸಮಸ್ಯೆಯನ್ನು ಜನರು ಹೇಳಿದ್ದಾರೆ. ಸ್ವಚ್ಚತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಕಸವನ್ನು ಮಾರುಕಟ್ಟೆ ಪಕ್ಕದಲ್ಲೇ ಹಾಕಲಾಗುತ್ತಿದೆ. ಕೂಡಲೇ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಪAಚಾಯಿತಿ ವತಿಯಿಂದ ನಿವೇಶನ ಖರೀದಿಸಿ ಬಡ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡಲಾಗುವುದು ಎಂದು ಪಂಚಾಯಿತಿ ಆಡಳಿತ ಮಂಡಳಿ ಈ ಹಿಂದೆಯೇ ಭರವಸೆ ನೀಡಿತ್ತು. ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ ಇದುವರೆಗೆ ನಿವೇಶನ ಖರೀದಿಸಿಲ್ಲ. ಕೂಡಲೆ ನಿವೇಶನ ಖರೀದಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಕೆಲ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಕೂಡಲೇ ಕಾಮಗಾರಿ ಕೈಗೊಳ್ಳಬೇಕು. ಪಟ್ಟಣ ವ್ಯಾಪ್ತಿಯಲ್ಲಿ ೬೦ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಐದಾರು ದೀಪಗಳು ಉರಿಯುತ್ತಿದೆ. ನಿರ್ವಹಣೆ ಮಾಡುತ್ತಿಲ್ಲ. ಪಂಚಾಯಿತಿ ಹಣವನ್ನು ಪೋಲು ಮಾಡಲಾಗಿದೆ. ಅವ್ಯವಹಾರವಾಗಿರುವ ಬಗ್ಗೆ ಸಂಶಯವಿದ್ದು ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕದಲ್ಲಿ ದುರಸ್ತಿ ಕಾರ್ಯ ಮುಗಿದಿದ್ದು, ಈಗಲೂ ಶುದ್ಧ ನೀರು ಸರಬರಾಜು ಆಗುತ್ತಿಲ್ಲ. ಇನ್ನು ೧೫ ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಹೆಸರಿನಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದವರು ನಿರ್ಮಿಸಿದ್ದ ಬಸ್ ಶೆಲ್ಟರ್‌ನ್ನು ಬಿಜೆಪಿಯವರು ಒಡೆದು, ಹೊಸ ಕಟ್ಟಡ ನಿರ್ಮಿಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಮೂಲ ಹೆಸರನ್ನು ಕಟ್ಟಡಕ್ಕೆ ಹಾಕದಿದ್ದರೆ ಪಂಚಾಯಿತಿ ಎದುರು ಹೋರಾಟ ಮಾಡಲಾಗುವುದು ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಬಸವರಾಜು, ಬ್ಲಾಕ್ ಉಪಾಧ್ಯಕ್ಷ ಮಂಜುನಾಥ್, ಪಕ್ಷದ ಪರಿಶಿಷ್ಟ ಜಾತಿ ಘಟಕದ ತಾಲೂಕು ಅಧ್ಯಕ್ಷ ಎಚ್.ಬಿ.ರಾಜಪ್ಪ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಕಚೇರಿ ಕಾರ್ಯದರ್ಶಿ ರಘು ಉಪಸ್ಥಿತರಿದ್ದರು.