ಬೆಂಗಳೂರು, ನ. ೯: ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿರುವ ೨೫ ಮಂದಿ ಸದಸ್ಯರ ಅಧಿಕಾರಾವಧಿ ೨೦೨೨ ರ ಜನವರಿ ೫ ಕ್ಕೆ ಮುಕ್ತಾಯಗೊಳ್ಳಲಿದೆ. ಈ ಪಟ್ಟಿಯಲ್ಲಿ ಕೊಡಗಿನ ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಪಿ ಸುನಿಲ್ ಸುಬ್ರಮಣಿ ಅವರೂ ಸೇರಿದ್ದು, ಜನವರಿ ೫ಕ್ಕೆ ಅವರ ಅಧಿಕಾರಾವಧಿಯೂ ಮುಕ್ತಾಯಗೊಳ್ಳಲಿದೆ. ತೆರವಾಗಲಿರುವ ಸ್ಥಾನಕ್ಕೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲು ನಿರ್ಧರಿಸಿದ್ದು ಇದಕ್ಕಾಗಿ ಅಧಿಸೂಚನೆಯೊಂದಿಗೆ ವೇಳಾಪಟ್ಟಿಯನ್ನೂ ನಿಗದಿ ಪಡಿಸಲಾಗಿದೆ.

ಕರ್ನಾಟಕ ವಿಧಾನ ಪರಿಷತ್‌ನ ೨೦ ಕ್ಷೇತ್ರಗಳಲ್ಲಿನ ೨೫ ಸ್ಥಾನಗಳಿಗೆ ೨೦೨೧ ರ ಡಿಸೆಂಬರ್ ೧೦ ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ ೧೪ ರಂದು ಫಲಿತಾಂಶ ಪ್ರಕಟವಾಗಲಿದೆ.

(ಮೊದಲ ಪುಟದಿಂದ) ನವೆಂಬರ್ ೧೬ ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ ೨೩ ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ನವೆಂಬರ್ ೨೪ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ ೨೬ ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ ೧೦ ರಂದು ಬೆಳಿಗ್ಗೆ ೮ ರಿಂದ ೪ ಗಂಟೆಯವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ ೧೪ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕೊಡಗು ಸೇರಿದಂತೆ ಬೀದರ್, ಗುಲ್ಬರ್ಗಾ, ಬೆಳಗಾವಿ, ಉತ್ತರ ಕನ್ನಡ, ದಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಮೈಸೂರಿನ ಒಟ್ಟು ೨೫ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.