ಮಕ್ಕಳಿಗೆ ಝೈಕೋವ್-ಡಿ ಕೋವಿಡ್ ಲಸಿಕೆ

ನವದೆಹಲಿ, ನ. ೮: ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾ ತಾನು ಸರ್ಕಾರಕ್ಕೆ ಒಂದು ಕೋಟಿ ಡೋಸ್‌ಗಳನ್ನು ಪ್ರತಿ ಡೋಸ್‌ಗೆ ೨೬೫ ರೂಪಾಯಿಯ ಬೆಲೆಗೆ ಪೂರೈಕೆ ಮಾಡುತ್ತಿರುವುದಾಗಿ ಹೇಳಿದೆ. ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯಾಗಿದ್ದು, ಸರ್ಕಾರಕ್ಕೆ ಪ್ರತಿ ಡೋಸ್‌ಗೆ ೨೬೫ ರೂಪಾಯಿ ಬೆಲೆಯಲ್ಲಿ ಪೂರೈಕೆ ಮಾಡಲಾಗುತ್ತಿದೆ, ಒಂದು ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಕ್ಕೆ ಸರ್ಕಾರದಿಂದ ಬೇಡಿಕೆ ಬಂದಿದೆ ಎಂದು ಸೂಜಿ-ಮುಕ್ತ ಲೇಪಕವನ್ನು ಜಿಎಸ್‌ಟಿ ರಹಿತವಾಗಿ ಪ್ರತಿ ಡೋಸ್‌ಗೆ ೯೩ ರೂಪಾಯಿಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ. ಸಾಂಪ್ರದಾಯಿಕ ಸಿರೆಂಜ್‌ಗಳ ಬದಲಾಗಿ ಸೂಜಿ ರಹಿತ ಅಪ್ಲಿಕೇಟರ್‌ಗಳನ್ನು ಬಳಕೆ ಮಾಡಿ ಈ ಲಸಿಕೆಯನ್ನು ನೀಡಲಾಗುತ್ತದೆ. ೨೮ ದಿನಗಳ ಮಧ್ಯಂತರದಲ್ಲಿ ಮೂರು ಡೋಸ್‌ಗಳನ್ನು ನೀಡಲಾಗುತ್ತದೆ. ಝೈಕೋವ್-ಡಿಯ ಮೂಲಕ ಸರ್ಕಾರದ ಲಸಿಕೆ ಯೋಜನೆಗೆ ಸಹಕರಿಸುವುದಕ್ಕಾಗಿ ನಾವು ಸಿದ್ಧರಿದ್ದೇವೆ. ಸೂಜಿ ಮುಕ್ತ ಲಸಿಕೆ ಹೆಚ್ಚು ಮಂದಿಗೆ ಲಸಿಕೆ ಪಡೆಯುವುದಕ್ಕೆ ಉತ್ತೇಜನ ನೀಡಲಿದೆ. ೧೨ ರಿಂದ ೧೮ ವರ್ಷಗಳವರೆಗಿನ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ ಎಂದು ಝೈಡಸ್ ಕ್ಯಾಡಿಲಾದ ಎಂಡಿ ಶರ್ವಿಲ್ ಪಟೇಲ್ ಹೇಳಿದ್ದಾರೆ.

ಪೇಜಾವರ ಮಠದ ಹಿರಿಯ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ

ಉಡುಪಿ, ನ. ೮: ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರದಾನ ಮಾಡಲಾಗಿದೆ. ನವದೆಹಲಿಯ ರಾಷ್ಟçಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ವಿಶ್ವೇಶ ತೀರ್ಥ ಶ್ರೀಗಳಿಗೆ ೨೦೧೯ ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ೨೦೧೯ ರ ಡಿ. ೨೯ ರಂದು ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮಿಗಳು ಇಹಲೋಕ ತ್ಯಜಿಸಿದ್ದರು. ಅಧ್ಯಾತ್ಮ ಕ್ಷೇತ್ರದಲ್ಲಿ ಅವರ ಕೊಡುಗೆ, ಸೇವೆಯನ್ನು ಗೌರವಿಸಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿತ್ತು.

ಮುಂಬೈ ಕರ್ನಾಟಕ ಇನ್ನು ಮುಂದೆ ಕಿತ್ತೂರು ಕರ್ನಾಟಕ

ಬೆಂಗಳೂರು, ನ. ೮: ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಇಷ್ಟು ದಿನ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳನ್ನು ಇನ್ನು ಮುಂದೆ ‘ಕಿತ್ತೂರು ಕರ್ನಾಟಕ’ ಎಂದು ಕರೆಯಲಾಗುವುದು ಎಂದರು. ಈ ಏಳೂ ಜಿಲ್ಲೆಗಳಿಗೆ ‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

ಕಾಶ್ಮೀರದ ಅನಂತನಾಗ್‌ನಲ್ಲಿ ಎಲ್‌ಇಟಿ ಉಗ್ರನ ಬಂಧನ

ಶ್ರೀನಗರ, ನ. ೮: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರ್-ಇ-ತೊಯ್ಬಾ(ಎಲ್‌ಇಟಿ) ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಭದ್ರತಾ ಪಡೆಗಳು ಸೋಮವಾರ ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಂತ್‌ನಾಗ್‌ನ ಅಶ್ಮುಕಮ್ ಪ್ರದೇಶದ ವಹಾದನ್ ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆ ಜಂಟಿಯಾಗಿ ನಡೆಸುತ್ತಿದ್ದ ಶೋಧ ಕಾರ್ಯಾಚರಣೆಯಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಂಧಿತ ಭಯೋತ್ಪಾದಕನನ್ನು ಹಫೀಜ್ ಅಬ್ದುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ. ಈ ಉಗ್ರ ಎಲ್‌ಇಟಿಯ ಅಂಗ ಸಂಸ್ಥೆ ಎನ್ನಲಾಗುತ್ತಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ನೊAದಿಗೆ ಸಕ್ರಿಯವಾಗಿದ್ದ ಎಂದು ಅವರು ತಿಳಿಸಿದ್ದಾರೆ. ಬಂಧನದ ಸಮಯದಲ್ಲಿ ಆತನ ಬಳಿ ಇದ್ದ ಪಿಸ್ತೂಲ್ ಮತ್ತು ಏಳು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ, ಭದ್ರತಾ ಪಡೆಗಳು ಕಟ್ಸು ಅರಣ್ಯದಿಂದ ಒಂದು ಎಕೆ ರೈಫಲ್, ಎರಡು ಮ್ಯಾಗಜೀನ್‌ಗಳು ಮತ್ತು ೪೦ ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿವೆ.