ಮಡಿಕೇರಿ, ನ. ೬: ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ದೇಶದ ಚುಕ್ಕಾಣಿ ಹಿಡಿದ ಬಳಿಕ ಭಾರತ ಸಮಗ್ರ ಅಭಿವೃದ್ಧಿ ಸಾಧಿಸಿ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದ ಹೊಟೇಲ್ ನ್ಯೂ ರಾಜ್‌ದರ್ಶನ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಸ್ಥಾಪನೆಯಾಗುವ ಸಂದರ್ಭ ಕಾರ್ಯಕರ್ತರ ಕೊರತೆ ಇತ್ತು. ಹಲವು ಏಳು ಬೀಳುಗಳನ್ನು ಕಂಡು ಇದೀಗ ಯಾರು ಮುಟ್ಟಲಾಗದ ಎತ್ತರಕ್ಕೆ ಬೆಳೆದಿದೆ. ಇದಕ್ಕೆ ಕಾರ್ಯಕರ್ತರ ಕೊಡುಗೆ ಅಪಾರವಾಗಿದೆ. ಹಗಲಿರುಳು ಶ್ರಮಿಸಿದ ಪರಿಣಾಮ ಇಂದು ಅಧಿಕಾರ ಹಿಡಿದಿದೆ. ಉತ್ತಮ ಆಡಳಿತ ನೀಡಿದ ಫಲವಾಗಿ ನಿರಂತರವಾಗಿ ಪಕ್ಷ ಗೆಲುವು ಸಾಧಿಸುತ್ತಿದೆ. ಕೊಡಗು ಜಿಲ್ಲೆಯ ಜಿ.ಪಂ. ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಅಭ್ಯರ್ಥಿಗಳಿರಲಿಲ್ಲ. ಸ್ಪರ್ಧಿಸಿದರೆ ಗೆಲುವುದಿಲ್ಲ ಎಂಬ ಮಾತಿತ್ತು. ಇದೀಗ ಚಿತ್ರಣ ಬದಲಾಗಿದೆ. ಇದು ಸಂಘಟನೆಯ ಶಕ್ತಿ ಎಂದು ಹೇಳಿದರು.
ಸೋಲನ್ನು ಸವಾಲಾಗಿ ಸ್ವೀಕರಿಸಿದ ಹಿನ್ನೆಲೆ ಪಂಚಾಯ್ತಿಯಿAದ ಕೇಂದ್ರ ಮಟ್ಟದ ತನಕ ಪಕ್ಷ ಸದೃಢವಾಗಿ ಬೆಳೆದಿದೆ. ಜಿಲ್ಲೆಯ ಬಹುತೇಕ ಗ್ರಾ.ಪಂ.ನಲ್ಲಿ ಬಿಜೆಪಿ ಆಡಳಿತವಿದೆ. ಅಲ್ಲದೆ ಜಿ.ಪಂ, ತಾ.ಪಂ. ಬಿಜೆಪಿ ತೆಕ್ಕೆಯಲ್ಲಿತ್ತು. ಮುಂದಿನ ಚುನಾವಣೆ ಯಲ್ಲಿಯೂ ಕಾರ್ಯಕರ್ತರು ಶ್ರಮವಹಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದ ಅವರು, ಕಾಂಗ್ರೆಸ್ ಮುಕ್ತ ಕೊಡಗು ಜಿಲ್ಲೆ ಮಾಡಲು ಪಣತೊಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆ ಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಪ್ರಪಂಚದಲ್ಲಿ ಭಾರತ ಮಾದರಿ ದೇಶವಾಗಿ ಪರಿವರ್ತನೆಯಾಗಿದೆ. ಜಮ್ಮುಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿ ಭಾರತದ ಮುಕುಟಮಣಿಯನ್ನು ಪ್ರಧಾನಿ ಮೋದಿ ಉಳಿಸಿದ್ದಾರೆ. ಭಾರತೀಯ ಸೇನೆಯನ್ನು ಗಟ್ಟಿಗೊಳಿಸಿದ್ದಾರೆ. ೧೦೦ ಕೋಟಿ ಡೋಸ್‌ಗಳಿಗೂ ಹೆಚ್ಚು ಉಚಿತ ಲಸಿಕೆ ನೀಡುವ ಮೂಲಕ ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ತೈಲ ಬೆಲೆ ಇಳಿಕೆ ಮೂಲಕ ಜನಪರವಾಗಿ ಕೇಂದ್ರ ನಡೆದುಕೊಳ್ಳುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಕೋವಿಡ್‌ನಿಂದ ಇಡೀ ಪ್ರಪಂಚ ನಲುಗಿದೆ. ಭಾರತ ಮಾತ್ರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಎದ್ದು ನಿಂತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣರಾಗಿದ್ದಾರೆ. ಚೀನಾ ಹಾಗೂ ಪಾಕ್ ಭಾರತದ ಮೇಲೆ ಸಂಚು ರೂಪಿಸುತ್ತಿದ್ದು, ಕೇಂದ್ರ ಸರಕಾರ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸುವುದಲ್ಲದೆ ಸೈನಿಕರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಮಾಡುತ್ತಿದೆ. ಭಾರತ ವಿಶ್ವಗುರುವಾಗುತ್ತಿದ್ದು, ಪ್ರಪಂಚದಲ್ಲಿ ಪ್ರಾತಿನಿಧ್ಯ ಪಡೆದುಕೊಂಡಿದೆ. ಕೇವಲ ಒಂದು ಕ್ಷೇತ್ರದಲ್ಲಿ ಸೋತಿರುವುದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಇದರಿಂದ ಕಾರ್ಯಕರ್ತರು ಕುಗ್ಗಬೇಡಿ. ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಾಗುತ್ತದೆ ಎಂದು ಹೇಳಿದರು.
ಮೋರ್ಚಾದ ರಾಜ್ಯಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ, ಪಕ್ಷದ ಬೆಳವಣಿಗೆಯಲ್ಲಿ ಮೋರ್ಚಾಗಳ ಪಾತ್ರ ಅಪಾರವಾಗಿದೆ. ಇದನ್ನು ಅರಿತು ಮುಂಚೂಣಿ ಘಟಕಗಳು ಕೆಲಸ ಮಾಡಬೇಕು. ನಿಸ್ವಾರ್ಥ, ಪ್ರಮಾಣಿಕ ವಾಗಿ ಶ್ರಮಿಸಬೇಕು. ಹಿಂದುಳಿದ ವರ್ಗದವರನ್ನು ಒಗ್ಗೂಡಿಸಿ ಪಕ್ಷವನ್ನು ಕಟ್ಟಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಮಂತ್ರದಲ್ಲಿ ಪಕ್ಷ ಮುನ್ನಡೆಯುತ್ತಿದೆ. ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಪಕ್ಷ ಬಿಜೆಪಿಯಾಗಿದ್ದು, ಸೇವೆಯೇ ಸಂಘಟನೆ ಎಂದು ಕಾರ್ಯಕರ್ತರು ಅರಿತು ಕೆಲಸ ಮಾಡಬೇಕು. ಬಿಜೆಪಿ ನಾಯಕರು ಸರ್ವಸ್ವವನ್ನು ತ್ಯಾಗ ಮಾಡಿದ ಕಾರಣಕ್ಕೆ ಪಕ್ಷ ಇಂದು ಗಟ್ಟಿಯಾಗಿ ಬೇರೂರಿದೆ. ಸಾಮಾನ್ಯ ಕಾರ್ಯಕರ್ತ ಪ್ರಧಾನಿ ಹುದ್ದೆ ಅಲಂಕರಿಸಿರುವುದು ಬಿಜೆಪಿ ಸಂಘಟನೆ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ರಾಜಕೀಯ ಹಿನ್ನೆಲೆ ಇಲ್ಲದಿರುವ ಬಹುತೇಕರು ಇಂದು ಉನ್ನತ ಹುದ್ದೆ ಪಡೆದಿರುವುದು ಪಕ್ಷದ ತತ್ವವನ್ನು ಸಾರುತ್ತದೆ. ವಿವಿಧ ಮೋರ್ಚಾಗಳು ಪಕ್ಷ ಸಂಘಟನೆಗೆ ಪೂರಕ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಸಭೆಗೂ ಮುನ್ನ ಇತ್ತೀಚೆಗೆ ಅಗಲಿದ ಚಲನಚಿತ್ರನಟ ಪುನೀತ್ ರಾಜ್‌ಕುಮಾರ್‌ಗೆ ಮೌನಾಚರಣೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಮೋರ್ಚಾದ ಜಿಲ್ಲಾಧ್ಯಕ್ಷ ಆನಂದ್ ರಘು, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಎಂ. ವಿಜಯ, ರಾಜ್ಯ ಕಾರ್ಯದರ್ಶಿ ಸುರೇಶ್ ಬಾಬು, ಮೋರ್ಚಾದ ಜಿಲ್ಲಾ ಉಸ್ತುವಾರಿ ವಿಠಲ ಪೂಜಾರಿ, ಜಿಲ್ಲಾ ಕಾರ್ಯದರ್ಶಿಗಳಾದ ಮೋಹನ್ ದಾಸ್, ಗಣೇಶ್, ನಗರಾಧ್ಯಕ್ಷ ಬಿ.ಎಂ. ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.